ತಾಳಿಕೋಟಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷತೆಗಾಗಿ ಕಿಟ್ ವಿತರಿಸಲಾಗುತ್ತಿದೆ ಎಂದು ಮುದ್ದೇಬಿಹಾಳ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪುರಸಭೆಯಿಂದ ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರು ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಕಸ, ಚರಂಡಿ ಸ್ವಚ್ಛತೆ ಮಾಡುವ ಮೂಲಕ ಪಟ್ಟಣವನ್ನು ಸುಂದರವಾಗಿಡಲು ಶ್ರಮಿಸುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವುದು ಪುರಸಭೆಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ರಕ್ಷಣಾ ಸಲಕರಣೆ ನೀಡಲಾಗಿದೆ. ಪೌರ ಕಾರ್ಮಿಕರು ಸರ್ಕಾರದಿಂದ ವಿತರಿಸುವ ಸುರಕ್ಷತಾ ಕಿಟ್ ಅನ್ನು ಕಡ್ಡಾಯವಾಗಿ ಉಪಯೋಗಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದ ಅವರು ಸ್ವಚ್ಛತೆ ಕಾಪಾಡುವಲ್ಲಿ ಜನರ ಪಾತ್ರವೂ ಮುಖ್ಯವಾಗಿದೆ, ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಸ್ಥಳೀಯ ಆಡಳಿತಕ್ಕೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಆರೋಗ್ಯಾಧಿಕಾರಿ ಫಿರೋಜ್ ಮುಲ್ಲಾ , ಮುಖಂಡರಾದ ಪ್ರಭುಗೌಡ ಮದರಕಲ್, ಸಿದ್ದನಗೌಡ ಪಾಟೀಲ ನಾವದಗಿ, ಶರಣು ಧಣಿ, ಸಂಗನಗೌಡ ಅಸ್ಕಿ, ಮೆಹಬೂಬ್ ಕೆಂಭಾವಿ, ಮೋದಿನ ನಗಾರ್ಚಿ, ಆಸೀಫ್ ಕೆಂಭಾವಿ, ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.


