ರಾಯಚೂರು ಡಿಸೆಂಬರ್ 22 (ಕರ್ನಾಟಕ ವಾರ್ತೆ): ಕಲಬುರಗಿ ವಿಭಾಗದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ಅವರು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯು ನಗರದ ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ಡಿ.22ರಂದು ನಡೆಯಿತು.
ಇದೆ ವೇಳೆ ಮಾತನಾಡಿದ ಎಸ್.ಆರ್.ಮೆಹರೋಜ್ ಖಾನ್ ಅವರು, ಗೃಹಲಕ್ಷ್ಮಿ ಯೋಜನೆಯ ಫಲಾನುಭಗಳಿಗೆ ಸಕಾಲಕ್ಕೆ ಸಹಾಯಧನ ಸಿಗಬೇಕು ಎನ್ನುವ ಸಲಹೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ತಾಂತ್ರಿಕ ತೊಂದರೆಗಳನ್ನು ಬೇಗನೆ ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳ ಪ್ರಗತಿಯ ಬಗ್ಗೆ ಇದೆ ವೇಳೆ ಎಸ್.ಆರ್.ಮೆಹರೋಜ್ ಖಾನ್ ಅವರು ಪರಿಶೀಲಿಸಿದರು. ಆಯಾ ಇಲಾಖೆಗಳ ಅಧಿಕಾರಿಗಳು ಸಭೆಗೆ ಅಂಕಿ-ಅಂಶಗಳ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ 737 ನ್ಯಾಯಬೆಲೆ ಅಂಗಡಿಗಳು ಪಗತಿಯಲ್ಲಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಯಚೂರು ಜಿಲ್ಲೆಯ ಕೇಂದ್ರ ವ್ಯಾಪ್ತಿಯ ಪ್ರತಿ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 21 ಕೆ.ಜಿ ಜೋಳ ಮತ್ತು 14 ಕೆ.ಜಿ ಸಾರವರ್ಧಿತ ಅಕ್ಕಿ ಹಾಗೂ ಕೇಂದ್ರ ವ್ಯಾಪ್ತಿಯ ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 03 ಕೆ.ಜಿ ಜೋಳ ಮತ್ತು 02 ಕೆ.ಜಿ ಸಾರವರ್ಧಿತ ಅಕ್ಕಿ ಜೊತೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಮಾರ್ಗಸೂಚಿಯಂತೆ ಏಕ ಸದಸ್ಯ, ದ್ವಿ ಸದಸ್ಯ ಮತ್ತು ತ್ರಿ ಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕಿಂತ ಹೆಚ್ಚಿನ ಸದಸ್ಯರುಳ್ಳ ಕೇಂದ್ರ ಮತ್ತು ರಾಜ್ಯ ವ್ಯಾಪ್ತಿಯ ಅಂತ್ಯೋದಯ(ಎಎವೈ) ಮತ್ತು ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 05 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮಾರ್ಗಗಳನ್ನು ಹೊಂದಾಣಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಆದಾಗ್ಯೂ ಜಿಲ್ಲೆಯಲ್ಲಿ ಹೆಚ್ಚಿನ ಸೇವೆ ನೀಡಲು ಸಾರಿಗೆ ಬಸ್‌ಗಳ ಅವಶ್ಯಕತೆಯಿದೆ ಎಂದು ಶಕ್ತಿ ಯೋಜನೆಯ ಅನುಷ್ಠಾನಾಧಿಕಾರಿಗಳಾದ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಾಣಧಿಕಾರಿಗಳು ಸಭೆಗೆ ಕೋರಿದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,52,582 ಗ್ರಾಹಕರ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ರಾಯಚೂರು ಜಿಲ್ಲೆಯಲ್ಲಿ 1,58,435 ನಿರುದ್ಯೋಗಿ ಯುವಕರು ಯುವನಿಧಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ, ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ನಾಗೇಂದ್ರಪ್ಪ ಮಠಮಾರಿ, ಗಫೂರ್ ಖಾನ್, ಹನುಮಂತಪ್ಪ ಜಾಲಿಬೆಂಚಿ, ಶೇಖರಗೌಡ ತುರುವಿಹಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು.ಹುಡೇದ್, ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನಾಧಿಕಾರಿಗಳಾದ ನವೀನ್‌ಕುಮಾರ್, ಎಂ.ಎಸ್.ಚಂದ್ರಶೇಖರ, ನಜೀರ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.


