ತಾಳಿಕೋಟಿ: ಈ ಭಾಗದ ಸಿದ್ದಿ ಪುರುಷರಾದ ಲಿಂಗೈಕ್ಯ ಶ್ರೀರಾಮಲಿಂಗೇಶ್ವರ ಮಹಾಸ್ವಾಮಿಗಳ ನೂತನ ಮಠ ಹಾಗೂ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿ ರಾಮಲಿಂಗಯ್ಯ ಶ್ರೀಗಳು ಪುಣ್ಯದ ಕಾರ್ಯವನ್ನು ಮಾಡಿದ್ದಾರೆ ಇದರ ಉದ್ಘಾಟನಾ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಸದ್ಭಕ್ತರ ಸಹಾಯ ಸಹಕಾರ ಅವರೊಂದಿಗಿರಲಿ ಎಂದು ಬಾಗೆವಾಡಿಯ ಪೂಜ್ಯಶ್ರೀ ಶಿವಪ್ರಕಾಶ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಚಬನೂರ ಗ್ರಾಮದ ಶ್ರೀ ಗುರು ರಾಮಲಿಂಗೇಶ್ವರ ಮಹಾ ವೇದಿಕೆಯಲ್ಲಿ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ನೂತನ ಮಠ ಹಾಗೂ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಇದು ನನ್ನ ಹುಟ್ಟೂರಾಗಿದೆ ರಾಮಲಿಂಗಯ್ಯ ಶ್ರೀಗಳು ನನ್ನ ಮನೆಯ ಗುರುಗಳು ಫೆಬ್ರವರಿ 8ರಂದು ನಡೆಯಲಿರುವ ಈ ಕಾರ್ಯಕ್ರಮದ ಯಶಸ್ವಿಗೆ ನಾನು ಮತ್ತು ನನ್ನ ಇಡೀ ಕುಟುಂಬ ಸದಸ್ಯರು ತನು ಮನ ಧನದೊಂದಿಗೆ ಕೆಲಸ ಮಾಡುತ್ತೇವೆ, ಕಾರ್ಯಕ್ರಮದಲ್ಲಿ ಉಜ್ಜಯಿನಿ ಜಗದ್ಗುರುಗಳು, ಹಲವಾರು ಪರಮ ಪೂಜ್ಯರು, ಹಾಗೂ ರಾಜಕೀಯ ಮುಖಂಡರು ಆಗಮಿಸುತ್ತಿದ್ದು ಇದರ ಯಶಸ್ವಿಗೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು. ಮುಖಂಡರಾದ ಬಸನಗೌಡ ಪಾಟೀಲ ಯಡಿಯಾಪುರ ಹಾಗೂ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ರೀತಿಯಿಂದಲೂ ಸಹಕರಿಸುವುದರ ಜೊತೆಗೆ ಇಬ್ಬರು ತಲಾ ಒಂದು ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು. ಕೊಡೆಕಲ್ಲದ ಶಿವಕುಮಾರ ಶ್ರೀಗಳು ಫೆಬ್ರುವರಿ 8 ರಂದು ಉದ್ಘಾಟನಾ ಸಮಾರಂಭದ ಅಂಗವಾಗಿ 12 ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳ ವಿವರವನ್ನು ಸಭೆಗೆ ನೀಡಿದರು. ಕಡಕೋಳದ ಶ್ರೀ, ಕೋಲಾರದ ಪ್ರಭುಕುಮಾರ ಶ್ರೀಗಳು, ಮನಗೂಳಿಯ ಸಂಗನಬಸವ ಶ್ರೀಗಳು, ದೇವರ ಹಿಪ್ಪರಗಿ ಜಡಿಮಠದ ಶ್ರೀಗಳು ಮಾತನಾಡಿ ರಾಮಲಿಂಗಯ್ಯ ಶ್ರೀಗಳು ಬಹಳ ದೊಡ್ಡ ಪುಣ್ಯದ ಕಾರ್ಯವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿ ಕಾರ್ಯಕ್ರಮದ ಯಶಸ್ವಿಗೆ ನಾವೆಲ್ಲರೂ ಸಹಕರಿಸುತ್ತೇವೆ ನಮ್ಮ ಜೊತೆಗೆ ಎಲ್ಲ ಸದ್ಭಕ್ತರು ಸಹಕರಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿ ಬೋರ್ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಿದ ಜಲಪೂರ ಗ್ರಾಮದ ಮುಖಂಡ ಸಿದ್ದನಗೌಡ ಬಿರಾದಾರ ಇವರ ಕಾರ್ಯವನ್ನು ವೇದಿಕೆ ವತಿಯಿಂದ ಶ್ಲಾಘಿಸಲಾಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ಮಠದ ಭಕ್ತರು ಕಾರ್ಯಕ್ರಮದ ತಮ್ಮ ಭಕ್ತಿಯ ಕಾಣಿಕೆಯನ್ನು ನೀಡಿದರು. ಸಭೆಯ ಸಾನಿಧ್ಯವನ್ನು ವಹಿಸಿ ಮಾಗಣಗೇರಿ ಷ.ಬ್ರ.ಡಾ. ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಗ್ರಾಮದ ಗಣ್ಯರಾದ ಬಸನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾವದಗಿ ಬ್ರಹನ್ಮಠದ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು,ಪಡೇಕನೂರದ ಮಲ್ಲಿಕಾರ್ಜುನ ಶ್ರೀಗಳು, ಕಲಕೇರಿಯ ಸಿದ್ದರಾಮ ಶಿವಾಚಾರ್ಯರು, ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯರು,ಸಾಸನೂರದ ಶ್ರೀಗಳು,ವಡವಡಗಿ ಶ್ರೀಗಳು, ವಿವಿಧ ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಬಸವರಾಜ ಗೊರಜಿ ನಿರೂಪಿಸಿ ವಂದಿಸಿದರು.

