ತಾಳಿಕೋಟಿ: ವಾರ್ಡ್ ಗಳಲ್ಲಿ ಸುಸಜ್ಜಿತವಾದ ರಸ್ತೆ, ಚರಂಡಿ, ಸಮರ್ಪಕವಾದ ಕುಡಿಯುವ ನೀರಿನ ಸೌಲಭ್ಯ, ಪಡಿತರ ಪೂರೈಕೆ ಸರಿಯಾಗಿಲ್ಲ, ಅಂಗನವಾಡಿ ಕೇಂದ್ರದ ಆಹಾರ ಪದಾರ್ಥಗಳು ಸರಿಯಾಗಿ ಸಿಗುತ್ತಿಲ್ಲ, ಸರ್ಕಾರಿ ಶಾಲೆಗೆ ಕಾಂಪೌಂಡ್ ಇಲ್ಲದೆ ಇರುವುದರಿಂದ ಕಾನೂನುಬಾಹಿರ ಚಟುವಟಿಕೆಗಳು, ಘನ ತ್ಯಾಜ್ಯ ವಸ್ತು ವಿಲೇವಾರಿಯಲ್ಲಿ ನಿರ್ಲಕ್ಷೆ, ಬಡಾವಣೆಯಲ್ಲಿರುವ ಉದ್ಯಾನವನದ ಸ್ವಚ್ಛತೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಇಲ್ಲಿಯ ಬಡಾವಣೆ ಜನರು ಮುಂದಿಟ್ಟಿದ್ದಾರೆ ಅವುಗಳನ್ನು ಆದಷ್ಟು ಬೇಗ ಪರಿಹರಿಸಬೇಕು ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಯಾವುದೇ ರೀತಿಯ ನಿರ್ಲಕ್ಷೆಯನ್ನು ನಾನು ಸಹಿಸುವುದಿಲ್ಲ ಎಂದು ಶಾಸಕ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಅಧಿಕಾರಿಗಳಿಗೆ ತಿಳಿಸಿದರು. ರವಿವಾರ ಪಟ್ಟಣದ ಆಶ್ರಯ ನಗರದ ಸರ್ಕಾರಿ ಶಾಲೆ ಆವರಣದಲ್ಲಿ ಪುರಸಭೆ ಕಾರ್ಯಾಲಯ ತಾಳಿಕೋಟಿ ವತಿಯಿಂದ ಹಮ್ಮಿಕೊಂಡ ವಾರ್ಡ್ ಮಟ್ಟದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು. ಆಶ್ರಯ ನಗರವು ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಬಡವರೆ ಹೆಚ್ಚಾಗಿರುವುದರಿಂದ ಇಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಐದಾರು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿರುವುದರಿಂದ ತುಮಕ ತೊಂದರೆ ಆಗುತ್ತದೆ ಎಂದು ಬಡಾವಣೆ ನಿವಾಸಿಗಳು ತಿಳಿಸಿದಾಗ ಪುರಸಭೆ ಮುಖ್ಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿ ವಾರಕ್ಕೆ ಎರಡು ಬಾರಿ ನೀರು ಪೂರೈಕೆ ಆಗುವಂತೆ ನೋಡಿಕೊಳ್ಳಲು ಸೂಚಿಸಿದರು. ಅದರಂತೆ ಅಂಗನವಾಡಿ ಹಾಗೂ ಪಡಿತರ ಕೇಂದ್ರದ ಅವ್ಯವಸ್ಥೆ ಸರಿಪಡಿಸಲು ತಹಸಿಲ್ದಾರ್ ಅವರಿಗೆ ಸೂಚನೆ ನೀಡಿದರು. ಆದಷ್ಟು ಬೇಗ ಸ್ವಚ್ಛಗೊಳಿಸಿ ಸುಂದರವಾಗಿಡಲು ಹಾಗೂ ಬಡಾವಣೆ ನಿವಾಸಿಗಳು ಸಹ ತಮ್ಮ ಮನೆಗಳ ಮುಂದೆ ಗಿಡಗಳನ್ನು ನೆಡೆಸಲು ತಿಳಿಹೇಳಿದರು. ಕೆಲ ಮಹಿಳೆಯರು ನಮಗೆ ಮನೆಗಳನ್ನು ನೀಡುವುದಾಗಿ 50,000 ಪಡೆದುಕೊಂಡಿದ್ದು ಇಲ್ಲಿವರೆಗೆ ಮನೆಗಳನ್ನು ಕೊಟ್ಟಿಲ್ಲ ನಾವು ಬಡವರು ಹೆಚ್ಚು ಮತ ಕಟ್ಟಿ ಮನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು ಇದಕ್ಕೆ ಉತ್ತರಿಸಿದ ಶಾಸಕರು ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಯಾಗಿದೆ ನನಗೆ ಏನು ಮಾಡಲು ಬರುವುದಿಲ್ಲ ಯಾರಿಗೆ ಮನೆಗಳು ಬೇಡವೋ ಅವರು ಬಿಡಬಹುದಾಗಿದೆ ಎಂದರು. ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣವನ್ನು ಅನುದಾನ ಬಿಡುಗಡೆಗೊಳಿಸಿಕೊಂಡು ಮಾಡಲಾಗುವುದು ಎಂದರು. ನಿಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅವರಿಗೆ ಬೇಕು ಎಂದರು. ವಿಜಯಪುರ ಉಪ ವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಗುರುನಾಥ ದಡ್ಡೆ, ತಹಸಿಲ್ದಾರ್ ಡಾ. ವಿನಯಾ ಹೂಗಾರ, ಮುಖ್ಯಾಧಿಕಾರಿ ವಸಂತ ಪವಾರ, ಸಿ.ಎಚ್ಎಸ್ಸಿ ಆಡಳಿತ ವೈದ್ಯಧಿಕಾರಿ ಡಾ.ಶ್ರೀಶೈಲ್ ಹುಕ್ಕೇರಿ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಪಿಎಸ್ಐ ಜ್ಯೋತಿ ಖೋತ್, ಪುರಸಭೆ ಮಾಜಿ ಅಧ್ಯಕ್ಷೆ ನೀಲಮ್ಮಗೌಡತಿ ಪಾಟೀಲ, ಮುಖಂಡರಾದ ವಿ.ಸಿ.ಹಿರೇಮಠ, ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್ಲ,ಸಂಗನಗೌಡ ಅಸ್ಕಿ,ಬಸನಗೌಡ ಜೈನಾಪೂರ, ಮಹೆಬೂಬ ಕೆಂಭಾವಿ, ಕಾಶಿನಾಥ ದೇಸಾಯಿ, ಆಸಿಫ್ ಕೆಂಬಾವಿ, ಗೋಪಾಲ ಕಟ್ಟಿಮನಿ, ಬಸ್ಸು ಮಾದರ, ಪುರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಮತ್ತು ನಿವಾಸಿಗಳು ಇದ್ದರು.

