ಬೆಂಗಳೂರು : ಡಿ.20 www.bengaluruwire.com : ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ಚಾಟಿ ಬೀಸಿದೆ. ಸರ್ಕಾರಿ ನೌಕರರು ಕಚೇರಿ ಸಮಯದಲ್ಲಿ ಅನಗತ್ಯವಾಗಿ ಓಡಾಡುವುದಕ್ಕೆ ಕಡಿವಾಣ ಹಾಕಲು ಮತ್ತು ಕಚೇರಿಯ ಘನತೆಗೆ ತಕ್ಕಂತಹ ಉಡುಗೆ ತೊಡುಗೆ ಧರಿಸುವುದನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಡಿ.18 ರಂದು ಸುತ್ತೋಲೆ [ಸಿಆಸುಇ(ಆಸು)/196 ಕತವ 2025] ಹೊರಡಿಸಿದೆ.

ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸರ್ಕಾರಿ ನೌಕರರ ವರ್ತನೆ, ವಸ್ತ್ರಸಂಹಿತೆ ಪಾಲನೆ ಮತ್ತು ರಿಜಿಸ್ಟರ್ ನಿರ್ವಹಣೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಹಲವು ಬಾರಿ ಸೂಚನೆ ನೀಡಿದ್ದರೂ ಪಾಲನೆಯಾಗದ ಕಾರಣ, ಈ ಬಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ.

1. ಬೆಳಗ್ಗೆ 10.10ಕ್ಕೆ ಹಾಜರಾತಿ ಕಡ್ಡಾಯ:

ಸರ್ಕಾರಿ ಕಚೇರಿಗಳ ನಿಗದಿತ ಸಮಯ ಬೆಳಗ್ಗೆ 10.10 ಗಂಟೆ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು ಹಾಗೂ ಕಚೇರಿ ಸಮಯ ಮುಗಿಯುವವರೆಗೂ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ಇರಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

2. ಚಲನವಲನ ವಹಿ (Movement Register) ನಿರ್ವಹಣೆ:

ಕಚೇರಿ ಸಮಯದಲ್ಲಿ ನೌಕರರು ಸೀಟಿನಿಂದ ನಾಪತ್ತೆಯಾಗುವುದನ್ನು ತಡೆಯಲು ‘ಚಲನವಲನ ವಹಿ’ಯನ್ನು ಕಡ್ಡಾಯವಾಗಿ ನಿರ್ವಹಿಸಲು ಸೂಚಿಸಲಾಗಿದೆ.

* ಅಧಿಕೃತ ಕೆಲಸಕ್ಕಾಗಿ ಹೊರಗೆ ಹೋಗುವುದಿದ್ದರೆ, ವಹಿಯಲ್ಲಿ ಕಾರಣ ಮತ್ತು ಉದ್ದೇಶವನ್ನು ನಮೂದಿಸಬೇಕು.

* ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯಲೇಬೇಕು.

* ಹೊರಗೆ ಹೋದ ಸಮಯ ಮತ್ತು ಹಿಂದಿರುಗಿದ ಸಮಯವನ್ನು ಸಹಿಯೊಂದಿಗೆ ದಾಖಲಿಸಬೇಕು.

* ಒಂದು ವೇಳೆ ವಹಿಯಲ್ಲಿ ದಾಖಲಿಸದೆ ಕಚೇರಿಯಲ್ಲಿ ಇಲ್ಲದಿದ್ದರೆ, ಅಂತಹ ನೌಕರರನ್ನು ‘ಅನಧಿಕೃತ ಗೈರು ಹಾಜರಿ’ ಎಂದು ಪರಿಗಣಿಸಿ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.

3. ನಗದು ಘೋಷಣೆ (Cash Declaration) ಮರೆಯುವಂತಿಲ್ಲ:

ಅಧಿಕಾರಿಗಳು ಅಥವಾ ನೌಕರರು ಕಚೇರಿಗೆ ಬಂದು ಹಾಜರಾತಿ ವಹಿಗೆ (ಅಥವಾ ಬಯೋಮೆಟ್ರಿಕ್) ಸಹಿ ಹಾಕಿದ ತಕ್ಷಣ, ತಮ್ಮ ಬಳಿ ಇರುವ ನಗದು ಹಣವೆಷ್ಟು ಎಂಬುದನ್ನು ‘ನಗದು ಘೋಷಣೆ ವಹಿ’ಯಲ್ಲಿ ನಮೂದಿಸಿ ಸಹಿ ಮಾಡಬೇಕು. ಸಿಬ್ಬಂದಿಗಳು ಇದನ್ನು ಪಾಲಿಸುತ್ತಿದ್ದಾರೆಯೇ ಎಂದು ಮೇಲಾಧಿಕಾರಿಗಳು ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶಿಸಲಾಗಿದೆ.

4. ಸಭ್ಯ ಉಡುಗೆ-ತೊಡುಗೆ (Dress Code):

ಸರ್ಕಾರಿ ನೌಕರರು ಕಚೇರಿಯ ಘನತೆಗೆ ಧಕ್ಕೆ ಬಾರದಂತೆ ಮತ್ತು ಶೋಭೆ ತರುವಂತಹ ಸಭ್ಯ ಉಡುಗೆಗಳನ್ನು ಮಾತ್ರ ಧರಿಸಬೇಕು. ಜೀನ್ಸ್, ಟೀ-ಶರ್ಟ್ ನಂತಹ ಕ್ಯಾಶುವಲ್ ಉಡುಪುಗಳ ಬದಲಿಗೆ ಮಾನ್ಯತೆ ಪಡೆದ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ತಾಕೀತು ಮಾಡಿದೆ.

ಈ ನಿಯಮಗಳನ್ನು ಎಲ್ಲಾ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಒಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ. ಅವರು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *