ರಾಯಚೂರು,ಡಿ18-
ಗರ್ಭಿಣಿಯೆಂದು ತಿಳಿದ ದಿನದಿಂದ ವೈದ್ಯರ ಮೂಲಕ ತಪಾಸಣೆ, ಸಲಹೆ ಸೂಚನೆಗಳ ಅನುಸರಿಸುವಿಕೆಯಿಂದ ಹೆರಿಗೆ ಸಮಯದಲ್ಲಿ ಉಧ್ಭವಿಸುವ ಗಂಡಾಂತರಕಾರಿ ಅಂಶಗಳನ್ನು ನಿರ್ವಹಿಸಲು ಸರ್ಕಾರಿ ವೈದ್ಯರೊಂದಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ಪ್ರತಿ ತಿಂಗಳು 9 ತಾರೀಖಿನಂದು ತಪಾಸಣೆಯನ್ನು ತಮ್ಮ ಆಸ್ಪತ್ರೆಗಳಲ್ಲಿ ಉಚಿತವಾಗಿ ಅಥವಾ ಹತ್ತಿರ ಸರಕಾರಿ ಆಸ್ಪತ್ರೆಗಳಿಗೆ ಆಗಮಿಸಿ ಕೈಗೊಳ್ಳಲು ಮುಂದೆ ಬನ್ನಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರ ಬಾಬು ಕೊರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಕೃಷ್ಣ ಸಭಾಂಗಣದಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಹಮ್ಮಿಕೊಂಡ ತರಬೇತಿಯಲ್ಲಿ ಮಾತನಾಡುತ್ತಾ,
ಗರ್ಭಾವಸ್ಥೆಯ ಅವಧಿಯಲ್ಲಿ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸುವ, ಗರ್ಭದಲ್ಲಿ ಭ್ರೂಣದ ಸರಿಯಾದ ಬೆಳವಣಿಗೆಗೆ ಸಹಕಾರಿಯಾಗಿ ಸುರಕ್ಷಿತ ಹೆರಿಗೆಗೆ ಸಹಾಯಕವಾಗುವ ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡಲ್ಪಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಟ 180 ಸೇವಿಸಲು, ಕಬ್ಬಿಣಾಂಶ ಮಾತ್ರೆ ನುಂಗಿದರೆ, ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆಗಳನ್ನು, ಗಾಳಿಸುದ್ದಿಗಳನ್ನು ನಂಬದಂತೆ, ಅಲ್ಲದೆ ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ ( ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ ) ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೆ ಬರಬೇಕು ಎಂದು ಸಲಹೆ ನೀಡಲು ಖಾಸಗಿ ಕ್ಷೇತ್ರದ ವೈದ್ಯರು ಮುಂದೆ ಬರಲು ವಿನಂತಿಸಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ ನಂದಿತಾ ಎಮ್ ಎನ್ ಮಾತನಾಡಿ ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ಅಂದರೆ ಚೊಚ್ಚುಲು ಗರ್ಭಿಣಿ, ಎತ್ತರ ಕಡಿಮೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್, ಮುಂತಾದ ಕಾರಣಗಳಿದ್ದರೆ ದಯವಿಟ್ಟು ನಿರ್ಲಕ್ಷಿಸಿಸದಂತೆ ಹಾಗೂ ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಲು, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದುಡುವುದು, ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಬಳಸಲು ತಮ್ಮ ಬಳಿ ಬರುವ ದಂಪತಿಗಳಿಗೆ ಜಾಗೃತಿ ನೀಡಲು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ತಾಲೂಕಾ ಆರೋಗ್ಯಾಧಿಕಾರಿ ಡಾ ಪ್ರಜ್ವಲ್‌ಕುಮಾರ್, ತಜ್ಞ ವೈದ್ಯರಾದ ಡಾ ಅರುಣ್‌ಕುಮಾರ್, ಡಾ ಸಂಜಯ ಶೆಟ್ಟಿ, ಜಿಲ್ಲಾ ಆರೋಗ್ಯ ಶಿಕ್ಷಣಾದಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿವೈಹೆಚ್‌ಇಓ ಬಸಯ್ಯ, ಡಿಪಿಎಮ್ ನವೀನ್‌ಕುಮಾರ್, ಎಮ್‌ಎನ್‌ಡಿ ಗುರು ಗಂಪ್ಪಾ, ಸೇರಿದಂತೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು, ಐಎಮ್‌ಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

