ಮಸ್ಕಿ : ಸ್ವ ಸಹಾಯ ಒಕ್ಕೂಟದ ಮಹಿಳೆಯರು ಮತ್ಸ್ಯ ಸಂಜೀವಿನಿ ಮೂಲಕ ಉಪ ಆದಾಯ ಕಂಡುಕೊಳ್ಳಬಹುದಾಗಿದೆ ಎಂದು ಮಸ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ ಹೇಳಿದರು.
ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಸಮಕಲ್ ಗ್ರಾಮದ ಕೆರೆಯಲ್ಲಿ ಮಂಗಳವಾರ ಹಸಮಕಲ್ ಗ್ರಾಮದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ಶ್ರೀ ಅಂಬಾದೇವಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಕೆರೆಗೆ ಮೀನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ನೂತನವಾಗಿ ಮತ್ಸ್ಯ ಸಂಜೀವಿನಿ ಮತ್ತು ಕುಕ್ಕುಟ ಯೋಜನೆ ಜಾರಿಗೊಳಿಸಿದೆ. ಮತ್ಸ್ಯ ಸಂಜೀವಿನಿಯಡಿ ಗ್ರಾಪಂ ವ್ಯಾಪ್ತಿಯ ಕೆರೆಯಲ್ಲಿ ಮೀನು ಸಾಕಣೆ ಕೈಗೊಂಡರೆ, ಅತ್ಯಂತ ಕಡಿಮೆ ಮೊತ್ತದಲ್ಲಿ ಮೀನು ಮರಿಗಳನ್ನು ಒದಗಿಸಲಾಗುತ್ತಿದೆ. ಮೀನು ಮರಿಗಳ ಪಾಲನೆ ಪೋಷಣೆ ಕುರಿತು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಂದ ಅಗತ್ಯ ಮಾರ್ಗದರ್ಶನ ಒದಗಿಸಲಾಗುವುದು. ಅಲ್ಲದೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಅದೇ ರೀತಿ ಕುಕ್ಕುಟ ಯೋಜನೆಯಡಿ ಕೋಳಿಗಳ ರಕ್ಷಣೆಗೆ ಶೆಡ್ ಒದಗಿಸುವುದಲ್ಲದೇ, ಮೊಟ್ಟೆಗಳನ್ನು ಹತ್ತಿರದ ಅಂಗನವಾಡಿ, ಶಾಲೆಗಳಿಗೆ ಖರೀದಿಸಲಾಗುವುದು ಎಂದರು.
ಈ ವೇಳೆ ಒಕ್ಕೂಟದ ಅಧ್ಯಕ್ಷೆ ಪಾರ್ವತಮ್ಮ, ಗುಡದೂರು ಗ್ರಾಪಂ ಸದಸ್ಯರಾದ ಶಿವರಾಜ್, ಗುಡದೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೃಷ್ಣ ಹುನಗುಂದ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ತಾಲೂಕು ವ್ಯವಸ್ಥಾಪಕರಾದ ಮೌನೇಶ್, ವಲಯ ಮೇಲ್ವಿಚಾರಕರಾದ ಪ್ರಕಾಶ್, ರಾಜೀವ್ ಗಾಂಧೀ ಪಂಚಾಯತ್ ರಾಜ್ ಫೆಲೋ ವಿನೋದ್, ಬಿಆರ್ ಪಿ ಭವಾನಿ ಎಂಬಿಕೆ ಶಿವಲಿಂಗಮ್ಮ, ಪಶು ಸಖಿ ಫರೀದಾಬೇಗಂ, ಶ್ರೀ ಲಕ್ಷ್ಮೀ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಸದಸ್ಯೆಯರು, ಗ್ರಾಪಂ ಸಿಬ್ಬಂದಿ ಇದ್ದರು.
ಹಸಮಕಲ್ ಗ್ರಾಮದ ಕೆರೆಯಲ್ಲಿ ಮಂಗಳವಾರ ಮತ್ಸ್ಯ ಸಂಜೀವಿನಿ ಯೋಜನೆಯಡಿ ಕೆರೆಗೆ ಮೀನು ಬಿಡುವ ಕಾರ್ಯಕ್ರಮಕ್ಕೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷೆ ಪಾರ್ವತಮ್ಮ, ಗುಡದೂರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣ ಹುನಗುಂದ ಇತರರಿದ್ದರು.

