ನಮ್ಮ ಭಾರತ ದೇಶದಲ್ಲಿ ಕೊನೆಯ ಪೋಲಿಯೋ ಪ್ರಕರಣ 2011 ಜನೇವರಿಯಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ವರದಿಯಾದ ನಂತರ ಕಳೆದ 14 ವರ್ಷಗಳಿಂದ ನಾವು ಯಾವುದೇ ಪ್ರಕರಣ ವರದಿಯಾಗಿಲ್ಲ, ಆದರೂ ಸಹ ನೇರೆಯ ರಾಷ್ಟ್ರಗಳಲ್ಲಿ ಪ್ರಕರಣಗಳು ಇರುವುದರಿಂದ ಡಿಸೆಂಬರ್ 21 ನೇ ತಾರೀಖು ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಉಚಿತವಾಗಿ ಪೋಲಿಯೋ ಲಸಿಕೆ ಹಾಕಿಸಲು ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ಯ ವೈದ್ಯರಾದ ಡಾ ಮಹಮ್ಮದ್ ನಸೀರ್ ತಾಯಂದಿರಿಗೆ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಲ್ಲೂರು ಗ್ರಾಮದ ಲಕ್ಷ್ಮಿ ದೇವಸ್ಥಾನ ಬಳಿ ಸಾರ್ವತ್ರಿಕ ಲಸಿಕಾ ಅಧಿವೇಶನದಲ್ಲಿ ಹಾಜರಿದ್ದ ತಾಯಂದಿರಿಗೆ ಮಾಹಿತಿ ನೀಡಿ ಮಾತನಾಡುತ್ತಾ ಪೋಲಿಯೋ ಲಸಿಕೆ ಮಾತ್ರವಲ್ಲದೆ ಬಾಲ್ಯದಲ್ಲಿ ಮಕ್ಕಳಿಗೆ ಮಾರಕವಾಗಬಹುದಾದ 12 ಮಾರಕ ರೋಗಗಳ ವಿರುದ್ಧ ವಯಸ್ಸಿಗನುಸಾರವಾಗಿ ಉಚಿತವಾಗಿ ಲಸಿಕೆಗಳನ್ನು ಹಾಕಲಾಗುತ್ತಿದ್ದು ಮನೆಯ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ತಪ್ಪದೆ ಎಲ್ಲ ಲಸಿಕೆಗಳನ್ನು ಹಾಕಿಸಲು ವಿನಂತಿಸಿದರು.
ಜಿಲ್ಲಾ ಆರೊಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಮಾಹಿತಿ ನೀಡಿ ಹೆರಿಗೆ ನಂತರದಲ್ಲಿ ಎರಡನೆಯ ಮಗುವಿಗೆ ಕನಿಷ್ಟ ಮೂರು ವರ್ಷಗಳ ಜನನದ ಅಂತರ ತಾಯಿ ಮಗುವಿನ ಆರೋಗ್ಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದ್ದು, ದಂಪತಿಗಳು ನಿರ್ಧರಿಸಿ ಪತ್ನಿಗೆ ಸರಳ, ಸುಲಭವಾದ “ಅಂತರ” ಚುಚ್ಚುಮದ್ದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಡೆಯುವ ಮೂಲಕ ಹೊಲ-ಮನೆಯ ಕೆಲಸ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಯಾವುದೇ ಅಂಜು ಅಳುಕಿಲ್ಲದೆ ನಿರ್ವಹಿಸಬಹುದಾಗಿದ್ದು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿ, ರೂಪಾ, ಹೆಚ್‌ಐಓ ಮಹಮ್ಮದ್, ಸಿಹೆಚ್‌ಓ ನಾಗರಾಜ, ಮೌನಿಕಾ, ಆಶಾ ಕಾರ್ಯಕರ್ತೆ ದುರ್ಗಮ್ಮ, ನಾಗಮ್ಮ, ಸೇರಿದಂತೆ ವಿರೇಶ್ ಹಾಗೂ ತಾಯಂದಿರು ಮತ್ತು ಇತರರು ಹಾಜರಿದ್ದರು.

