ರಾಯಚೂರು: ಡಿ.8: ಬೋಧನೆಯಲ್ಲಿನ ಕ್ರಿಯಾಶೀಲತೆ ಹೆಚ್ಚಿಸಿ ಸೃಜನಶೀಲತೆ ವಿಸ್ತರಿಸಲು ಹೆಚ್ಚೆಚ್ಚು ಸಹಪಠ್ಯಚಟುವಟಿಕೆಗಳಲ್ಲಿ ಶಿಕ್ಷಕರು ಪಾಲ್ಗೊಳ್ಳಬೇಕು ಎಂದು ಕೆ. ಡಿ. ಬಡಿಗೇರ್ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ರಾಯಚೂರು ಅವರು ತಿಳಿಸಿದರು. ಅವರು ಸೋಮವಾರದಂದು ರಾಯಚೂರು ನಗರದ ಕೆಡಬ್ಲ್ಯೂ ಟಿ ಶಾಲೆಯಲ್ಲಿ ಶಿಕ್ಷಕರ ಕಲ್ಯಾಣ ನಿಧಿಯಿಂದ ರಾಯಚೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯಚಟುವಟಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ವಿವಿಧ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆಯಾಗಿ ಜ್ಞಾನವು ವಿಸ್ತಾರಗೊಳ್ಳುವುದು. ಹೊಸ ಕೌಶಲಗಳಿಕೆ, ಬೋಧನೆಯಲ್ಲಿ ಪರಿಣಾಮಕಾರಿತ್ವವನ್ನು ಗಳಿಸಿಕೊಳ್ಳಬಹುದಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಅನುಕರಣೆ ಮಾಡಲು ಮಾದರಿಯಾಗಬಹುದಾಗಿದೆ. ಜೀವನ ಮತ್ತು ವೃತ್ತಿಯಲ್ಲಿನ ಉತ್ಸಾಹ ವೃದ್ಧಿಯು ಅಗತ್ಯವಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಿ ಮಾತನಾಡಿ, ನಿಮ್ಮನ್ನು ನೀವು ಕ್ರಿಯಾಶೀಲರನ್ನಾಗಿ ಮಾಡಿಕೊಳ್ಳಲು
ತಮ್ಮಲ್ಲಿಯ ಪ್ರತಿಭೆಯನ್ನು ಪ್ರದರ್ಶಿಸಲು
ಇದೊಂದು ಉತ್ತಮ ವೇದಿಕೆಯಾಗಿದೆ. ಇದರಿಂದ
ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವುದರೊಂದಿಗೆ ಮಕ್ಕಳ ಕಲಿಕೆಗೆ ಪೂರಕವಾಗುಲಿದೆ ಎಂದರು. ವಿವಿಧ ಸಂಘದ ಪದಾಧಿಕಾರಿಗಳು ಕೈಜೋಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಯುನುಸ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತರೆ ಶಿಕ್ಷಕರೊಂದಿಗೆ ಬೆರೆತು ಅನುಭವ ಹಂಚಿಕೊಳ್ಳಲು, ವೃತ್ತಿಜೀವನ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಹಪಠ್ಯಚಟುವಟಿಕೆ ಸಹಕಾರಿಯಾಗಿವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಬೋಧನೆಯಲ್ಲಿ ರಚನಾತ್ಮಕವಾದ ವಿವಿಧತೆಯನ್ನು ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಯಿನುಲ್ ಹಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ನಾಯಕ ಕಾರ್ಯಕ್ರಮದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಕುರಿತು ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ರಾಮಕೃಷ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಸಹಪಠ್ಯ ಚಟುವಟಿಕೆಗೆ ವೇದಿಕೆಯನ್ನು ಕಲ್ಪಿಸಿದ್ದು ಎಲ್ಲ ಶಿಕ್ಷಕರು ಇದರ ಸದುಪಯೋಗಪಡಿಸಿಕೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಸಂಘದ ಪದಾಧಿಕಾರಿಗಳನ್ನು ವಿನಂತಿಸಿಕೊಂಡರು. ಕಾರ್ಯಕ್ರಮವನ್ನು ಪಶ್ಚಿಮ ವಲಯ ಸಿಆರ್ಪಿ ವೀರೇಶ್ ಟಿ ಅವರು ನಿರೂಪಿಸಿದರು. ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲ ಗಣ್ಯಮಾನ್ಯರನ್ನು ರಾಯಚೂರು ದಕ್ಷಿಣ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ರಾವುತರಾವ್ ಬರೂರ ಅವರು ಸ್ವಾಗತಿಸಿದರು. ರಾಯಚೂರು ಕೇಂದ್ರ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಿವುಕುಮಾರ ವಂದಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಂಗಸ್ವಾಮಿ, ತಾಲೂಕು ದೈಹಿಕ ವಿಷಯ ಪರೀಕ್ಷಕರಾದ ಪರಶುರಾಮ್ ಹುಜರತಿ, ವಿವಿಧ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಯಂಕಪ್ಪ ಪಿರಂಗಿ, ದೇವೇಂದ್ರಪ್ಪ, ವಿನೋದ ಕುಮಾರ, ಗೂಳಪ್ಪ, ರೆಹಮಾನ್, ಆನಂದ, ಶಂಕ್ರಪ್ಪ, ಮಹಮ್ಮದ್ ಇಸ್ಮೈಲ್, ಧನಲಕ್ಷ್ಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರದಲ್ಲಿ ಶಿಕ್ಷಕರಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಭಕ್ತಿಗೀತೆಗಾಯನ, ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ರಸಪ್ರಶ್ನೆ, ಸ್ಥಳದಲ್ಲಿಯೇ ಚಿತ್ರಕಲೆ ಮತ್ತು ಪಾಠೋಪಕರಣಗಳ ತಯಾರಿಕೆ, ಪ್ರಬಂಧ, ಆಶುಭಾಷಣ ಸ್ಪರ್ಧೆ ನಡೆದವು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *