ಕೊಪ್ಪಳ : ದುಶ್ಚಟಗಳಿಂದ ದೂರವಿದ್ದು, ಉತ್ತಮ ಹಾಗೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ ಹೇಳಿದರು
ನಗರದ ಹಳೇ ಜಿಲ್ಲಾಸ್ಪತ್ರೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಕೋಟ್ಪಾ-2003 ಕಾಯ್ದೆ ಅನುಷ್ಠಾನ ಕುರಿತ ಜಿಲ್ಲಾ ಮತ್ತು ತಾಲೂಕು ಮಟ್ಟದ ತನಿಖಾಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ವಾತನಾಡಿದರು.ದಕ್ಷಿಣ ಕರ್ನಾಟಕದಲ್ಲಿ ಸಿಗರೇಟ್ ಸೇದುವವರ, ಉತ್ತರ ಕರ್ನಾಟಕದಲ್ಲಿ ಗುಟ್ಕಾ ಜಗಿಯುವವರ ಸಂಖ್ಯೆ ಹೆಚಾಗಿದೆ. ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಯುವಜನತೆ ಜಾಗೃತರಾಗಬೇಕು ಎಂದರು.
ಡಿಎಚ್‌ಒ ಡಾ.ಟಿ.ಲಿಂಗರಾಜು ವಾತನಾಡಿ, ತಂಬಾಕಿನಲ್ಲಿ 7000ಕ್ಕೂ ಹೆಚ್ಚು ಅಪಾಯಕಾರಿ ರಾಸಾಯನಿಕಗಳಿವೆ. ಪ್ರತಿ ಸಿಗರೇಟ್ ಸೇವನೆ ಮನುಷ್ಯನ ಆಯಸ್ಸನ್ನು 7 ನಿಮಿಷ ಕಡಿಮೆ ವಾಡುತ್ತದೆ. ಕ್ಯಾನ್ಸರ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ರೋಗಗಳಿಗೆ ಕಾರಣವಾಗಿದೆ. ಮಹಿಳೆಯರಲ್ಲಿ ಗರ್ಭಪಾತ ಮತ್ತು ಶಿಶುಮರಣದ ಅಪಾಯ ಹೆಚ್ಚಿಸುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ತಂಬಾಕು ನಿಯಂತ್ರಣ ಕೋಶದ ಮಹಾಂತೇಶ ಉಳ್ಳಾಗಡ್ಡಿ, ಸಲಹೆಗಾರ ಎನ್.ತೀರ್ಥೇಶ, ಜಿಲ್ಲಾ ಸಲಹೆಗಾರ ಸಂಗಪ್ಪ ಮಮಟಗೇರಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎಚ್.ರವೀಂದ್ರನಾಥ್, ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ.ಕುವಾರಸ್ವಾಮಿ ಗೋನಾಳ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ.ಶಿವಾನಂದ, ಸೈಕಾಲಾಜಿಸ್ಟ್ ಶಾಂತಮ್ಮ ಕಟ್ಟಿಮನಿ ಇತರರಿದ್ದರು. ”
ಜಿಲ್ಲೆಯಲ್ಲಿ ಕೊಟ್ಪಾ-2003ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳು ಸಹಕರಿಸಬೇಕು. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾಯ್ದೆ ಅನುಷ್ಠಾನಕ್ಕೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
– ಸಿದ್ರಾಮೇಶ್ವರ, ಎಡಿಸಿ, ಕೊಪ್ಪಳ

