ದೌರ್ಜನ್ಯಕ್ಕೊಳಗಾದ ದಲಿತ, ಅತ್ಯಾಚಾರಕ್ಕೊಳಗಾದ ಹೆಣ್ಗೂಸು, ಹಿಂಸೆಗೊಳಗಾದ ಅಲ್ಪಸಂಖ್ಯಾತ, ಬಹಿಷ್ಕರಿಸಲ್ಪಟ್ಟ ಬಹುಸಂಖ್ಯಾತ, ಅರಿವಿಲ್ಲದ ತಪ್ಪಿಗೋ, ಪ್ರಭುತ್ವಗಳ ಬೇಜವಾಬ್ದಾರಿತನಕ್ಕೋ, ಜೈಲುಪಾಲಾದ ಯುವಕನೋ, ಮೋಸಕ್ಕೊಳಗಾದ ಹಿರಿಜೀವಗಳೋ, ಅಂತರರಾಷ್ಟ್ರೀಯ ನಾಯಕರ ಪ್ರತಿಷ್ಠೆಯ ಬಲಿಪಶುಗಳಾದ ನಾಗರಿಕರೋ!!! ಮಾನವ ಹಕ್ಕುಗಳ ಬಗ್ಗೆ ಮಾತನಾಡುವಾಗ ನಮ್ಮ ನೆನಪಿಗೆ ಇಂಥವರು ಬರುತ್ತಾರೆಯೇ??? ಭೂಮಂಡಲಾದ್ಯಂತ ಸೂಪರ್ ಪವರ್ ಎಂದು ಬಿಂಬಿಸಿಕೊಳ್ಳುವ ಬೀದಿ ಬದಿಯ ಭಂಡ ಅಧಿಕಾರದ ಮದವೇರಿಸಿಕೊಂಡವರಿಗೆ ಮಾನವ ಹಕ್ಕುಗಳೆಂದರೇನು ಎಂಬುದರ ಅರಿವಾದರೂ ಇದೆಯೇ? ಎಲ್ಲೋ ಒಬ್ಬ ಮನುಷ್ಯನಿಗೆ ಅನ್ಯಾಯವಾದರೂ ಅದು ಮನುಕುಲದ ಹಕ್ಕುಗಳ ಉಲ್ಲಂಘನೆ ಎಂಬ ವಿಶ್ವ ಮಾನವತ್ವದ ಅರಿವಾದರೂ ನಮಗಿದೆಯೇ?
ಮಾನವ ಹಕ್ಕುಗಳೆಂದರೆ ಕೇವಲ ಕಾನೂನಾತ್ಮಕ ಹಕ್ಕುಗಳು ಮಾತ್ರವಲ್ಲ, ಅವು ನ್ಯಾಯಪರತೆಯೊಂದಿಗೆ ಮಾನವನ ಘನತೆಯ ಮೂಲಭೂತ ತತ್ವಗಳಾಗಿವೆ. ಮನುಷ್ಯರು ಮನುಷ್ಯರಾಗಿ ಹುಟ್ಟಿರುವುದರಿಂದ ಸಿಗುವಂತಹ ವಿಶೇಷ ಅವಕಾಶಗಳಾಗಿವೆ. ಈ ತತ್ವಗಳು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಘೋಷಣೆಯ(UDHR) ಆತ್ಮವಾಗಿವೆ. 1948, ಡಿಸೆಂಬರ್ 10 ರಂದು ವಿಶ್ವಸಂಸ್ಥೆ ಅಂಗೀಕರಿಸಿದ ಈ ವಿಶೇಷ ಘೋಷಣೆಯು ಮನುಷ್ಯರ ಅಸ್ಮಿತೆಗೆ ಸಿಕ್ಕಿರುವ ಕಾನೂನುಬದ್ಧ ಭದ್ರತೆಗಳಾಗಿವೆ. ಮನುಕುಲದ ಇತಿಹಾಸದಲ್ಲಿ ಜಾತಿ, ಧರ್ಮ, ವರ್ಗ,ವರ್ಣ, ಇತ್ಯಾದಿ ಭೇದಗಳಿಲ್ಲದೇ ಎಲ್ಲರಿಗೂ ಸಮಾನತೆ, ಗೌರವಾನ್ವಿತ ಜೀವನದ ಜೊತೆಗೆ ಸಮೃದ್ಧ ಬದ್ಧತೆಯ ಬದುಕು ಹೊಂದಲು ಸಾಧ್ಯವಾಗಿರುವುದೇ ಮಾನವ ಹಕ್ಕುಗಳಿಂದ ಎಂದರೆ ತಪ್ಪಾಗಲಾರದು.
ಆದರೆ UDHR ಘೋಷಣೆಯ ನಂತರವೂ ಮನುಷ್ಯ ಆಧುನಿಕ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಆವಿಷ್ಕಾರ ನಡೆಸಿ ಒಂದು ಮಷಿನ್‌ಗೆ ಮನುಷ್ಯರೂಪ ನೀಡುವಂಥವನಾದರೂ ಮನುಷ್ಯರನ್ನು ಮಾತ್ರ ಮನುಷ್ಯರನ್ನಾಗಿ ಗೌರವಿಸುವುದರಲ್ಲಿ, ಇಂದಿಗೂ ವಿಫಲನಾಗಿರುವುದು ಅತ್ಯಂತ ಶೋಚನೀಯ ಪರಿಸ್ಥಿತಿಯಾಗಿದೆ.
ಹುಟ್ಟಿನಿಂದಲೇ ಯಾವುದೇ ತಾರತಮ್ಯವಿಲ್ಲದೇ ಬದುಕುವ ಮಾನವ ಹಕ್ಕು ನಮ್ಮದಾಗಿದ್ದರೆ ರೋಜಾ಼ ಪಾರ್ಕ್ ಎಂಬ ಮಹಿಳೆ ಅಂದು ಬಸ್‌ ನಲ್ಲಿ ಟಿಕೆಟ್ ತೆಗೆದುಕೊಂಡು ಪ್ರಯಾಣಿಸುತ್ತಿದ್ದಕ್ಕಾಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದರಿಂದ ಅಮೇರಿಕಾದಲ್ಲಿ ಮಾನವ ಹಕ್ಕುಗಳ ಚಳುವಳಿಯೇ ಆರಂಭವಾಯಿತು. ನಾಗರಿಕ ಹಾಗೂ ರಾಜಕೀಯ ಹಕ್ಕುಗಳು ಮಾನವ ಹಕ್ಕುಗಳ ಮೂಲ ಅಡಿಪಾಯಗಳಾಗಿದ್ದರೂ 21ನೇ ಶತಮಾನದಲ್ಲೂ ವಿಶ್ವಾದ್ಯಂತ, ಯುದ್ಧಕ್ಕೀಡಾಗಿ ಮಕ್ಕಳು ಸಾಯುತ್ತಿರುವುದು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಆರ್ಥಿಕ ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ ಪಡೆಯುವ ಮಾನವ ಹಕ್ಕುಗಳು ಎಂದೋ ನಮ್ಮದಾಗಿದ್ದರೂ, ಮತ್ತೆ ಮಲಾಲಾ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡುವಂಥ ಪರಿಸ್ಥಿತಿ ಎದುರಾಯಿತು.
ಕೆಲಸ ಮತ್ತು ಸಂಬಳದ ಹಕ್ಕು, ವ್ಯವಸ್ಥಿತ ಆರೋಗ್ಯ ಪಡೆಯುವ ಹಕ್ಕುಗಳ ಜೊತೆಗೆ ಉತ್ತಮ ಸಮಾಜ ಹಾಗೂ ಶುದ್ಧ ಪರಿಸರ ಹೊಂದುವ ಹಕ್ಕಿದ್ದರೂ ಪರಿಸರ ಉಳಿವಿಗಾಗಿ ಗ್ರೇಟಾ ಥನ್‌ಬರ್ಗ್ ಫ್ರೈಡೇಸ್ ಫಾರ್ ಫ್ಯೂಚರ್ ಚಳುವಳಿ ಆರಂಭಿಸಬೇಕಾಯಿತು. ಭಾರತದಲ್ಲಿ ಆದಿವಾಸಿಗಳ ಹೋರಾಟವು ಅವರ ಸಾಂಸ್ಕೃತಿಕ ಹಕ್ಕಿನ ರಕ್ಷಣೆಯಾಗಿದೆ.
ಒಂದೆಡೆ ಸಾರ್ವತ್ರಿಕತೆಯ ಪ್ರತಿಪಾದಕರು ಮಾನವ ಹಕ್ಕುಗಳು ಎಲ್ಲರಿಗೂ ಒಂದೇ ಎಂದು ವಾದಿಸಿದರೆ, ಮತ್ತೊಂದೆಡೆ ಸಾಂಸ್ಕೃತಿಕತೆಯ ಪ್ರತಿಪಾದಕರು ಮಾನವ ಹಕ್ಕುಗಳು ಘರ್ಷಣೆಗೆ ಎಡೆಮಾಡಿ ಕೊಡುತ್ತವೆ ಎಂದು ವಾದಿಸುತ್ತಾರೆ. ಈ ವಾದಗಳು ಕೇವಲ ಕಲಿಕೆಗೆ ಅಥವಾ ಒಂದು ವೈಚಾರಿಕತೆಗೆ ಸಂಬಂಧಿಸಿದಲ್ಲ. ಅದು ನೇರವಾಗಿ ಮೌಢ್ಯ ರೂಢಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದರ ಮೇಲೆ ಬೆಳಕು ಚೆಲ್ಲುತ್ತಿವೆ. ಅದಕ್ಕಾಗಿಯೇ ಡಾ. ಬಿ.ಆರ್. ಅಂಬೇಡ್ಕರ್‌ರವರು “ಜನರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವುದಕ್ಕೆ ಮೂಲ ಕಾರಣ, ಅವರದೇ ಮೌನ ಎಂದಿದ್ದಾರೆ.
ಪ್ರಸ್ತುತ ಜಗತ್ತಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಸ್ವರೂಪವೇ ಬದಲಾಗುತ್ತಿದೆ. ಮೂಲಭೂತ ದೈಹಿಕ ಹಿಂಸೆಯ ಜೊತೆಗೆ ಡಿಜಿಟಲ್ ನಿರಂಕುಶಾಧಿಪತ್ಯ ತೀವ್ರತರವಾಗಿವೆ.
ಸ್ವಕೀಯತೆ, ಗೌಪ್ಯತೆಗಳ ಉಲ್ಲಂಘನೆಗಳಂತೂ ಈಗ ಸಾಮಾನ್ಯವಾಗಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಂತಃಪತನವಾಗುತ್ತಿದೆ. ಆಧುನಿಕ ಅರಾಜಕತಾವಾದಿಗಳ ಕೈಯಲ್ಲಿ ಒಂದು ಸಂಸ್ಥೆ, ಒಂದು ಸಮಾಜ, ಒಂದು ದೇಶ, ಅಷ್ಟೇ ಅಲ್ಲ, ಇಡೀ ಮನುಕುಲವೇ ಹಾಳಾಗುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದೇವೆ. ಇಷ್ಟೆಲ್ಲಾ ಅಭಿವೃದ್ಧಿ ಸಾಧಿಸಿದರೂ ಮನುಷ್ಯರು ಅನ್ಯಾಯವನ್ನೇ ಎದುರಿಸಬೇಕಾಗಿದೆ. ಕೂತ ಜಾಗದಲ್ಲೇ ವಿಶ್ವವನ್ನು ಅರಿಯುವ ಸರ್ಕಾರಗಳು ಇಂದು ತನ್ನ ನಾಗರಿಕರ ಹಕ್ಕುಗಳನ್ನು ತಾವೇ ದಮನಿಸುತ್ತಿವೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಅಪರಾಧಗಳನ್ನು ನೋಡುವುದಾದರೆ UNHCR ರ 2024 ರ ವರದಿ ಪ್ರಕಾರ 114 ಮಿಲಿಯನ್ ಜನರು ವಿಶ್ವಾದ್ಯಂತ ಬಲವಂತದ ವಲಸೆಗೆ ತುತ್ತಾಗಿದ್ದಾರೆ. UNODC ವರದಿ ಪ್ರಕಾರ 2.4 ಮಿಲಿಯನ್ ಗಿಂತ ಅಧಿಕ ಜನರು ಮಾನವ ಕಳ್ಳಸಾಗಾಣಿಕೆಗೆ ಸಿಲುಕಿದ್ದಾರೆ. 2023-24 ರಲ್ಲಿ ಯುದ್ಧಕ್ಕೆ ಬಲಿಯಾದ ಜನರ ಸಂಖ್ಯೆ 40 ಸಾವಿರಕ್ಕಿಂತ ಅಧಿಕವಾಗಿದೆ. ಸುಮಾರು 3 ಲಕ್ಷಕ್ಕಿಂತ ಅಧಿಕ ಮಕ್ಕಳನ್ನು ಸಶಸ್ತ್ರ ಸಂಘರ್ಷಗಳಲ್ಲಿ ತೊಡಗಿಸಲಾಗಿದೆ. ಪತ್ರಕರ್ತರ ಮೇಲಿನ ದೌರ್ಜನ್ಯಗಳ ಸಂಖ್ಯೆ 1500 ಕ್ಕಿಂತ ಅಧಿಕವಾಗಿದೆ. WHO ವರದಿಯ ಪ್ರಕಾರ ಪ್ರತಿ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ಹಿಂಸೆಗೊಳಗಾಗುತ್ತಿರುವ ಘೋರ ಅಂಶಗಳು ಬೆಳಕಿಗೆ ಬಂದಿವೆ. ರಾಷ್ಟ್ರೀಯ ಮಟ್ಟದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ NCRB 2023ರ ವರದಿಯಂತೆ 445256ರಷ್ಟು ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. 162400ಕ್ಕಿಂತ ಅಧಿಕ ಮಕ್ಕಳ ಮೇಲಿನ ದೌರ್ಜನ್ಯಗಳು, 10 ಸಾವಿರಕ್ಕಿಂತ ಅಧಿಕ ಆದಿವಾಸಿಗಳ ಮೇಲೆ ದೌರ್ಜನ್ಯ, 65ಸಾವಿರಕ್ಕಿಂತ ಅಧಿಕ ಸೈಬರ್ ಅಪರಾಧಗಳು ದಾಖಲಾಗಿವೆ. ಕರ್ನಾಟಕದಲ್ಲಿ ನಡೆದ ಮಾನವ ವಿರೋಧಿ ಅಪರಾಧಗಳನ್ನು ನೋಡುವುದಾದರೆ NCRB 2023ರ ವರದಿಯ ಪ್ರಕಾರ 16000ಕ್ಕಿಂತ ಅಧಿಕ ಮಹಿಳೆಯರ ಮೇಲೆ ನಡೆದ ಅಪರಾಧಗಳಾಗಿದ್ದು, ಇದರಲ್ಲಿ ಗೃಹ ಹಿಂಸೆ, ಲೈಂಗಿಕ ಕಿರುಕುಳ ಹಾಗೂ ವರದಕ್ಷಿಣೆ ಸಾವುಗಳೇ ಅಧಿಕವಾಗಿವೆ, ಮಹಿಳೆಯರ ಮೇಲಿನ ಹಿಂಸೆಗಳಿಗೆ ಸಂಬಂಧಿಸಿದಂತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡಾ 12%ರಷ್ಟು ಅಪರಾಧಗಳು ಅಧಿಕವಾಗಿವೆ. ಸುಮಾರು 8 ಸಾವಿರಕ್ಕೂ ಅಧಿಕ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ POCSO ಅಪರಾಧಗಳು, 13 ಸಾವಿರಕ್ಕೂ ಅಧಿಕ ಸೈಬರ್ ಅಪರಾಧಗಳು ದಾಖಲಾಗಿವೆ. ಇವೆಲ್ಲಾ ದಾಖಲೆಯಾದ ಅಪರಾಧಗಳನ್ನು ಹೊರತು ಪಡಿಸಿ ನಿತ್ಯ ನಮ್ಮ ಸುತ್ತಮುತ್ತಲೂ ನಡೆಯುವ ಮಾನವ ಹಕ್ಕುಗಳ ವಿರೋಧಿ ಚಟುವಟಿಕೆಗಳು ನಮ್ಮನ್ನು ಮತ್ತಷ್ಟು ಚಿಂತೆಗೀಡು ಮಾಡುತ್ತಿವೆ. ಮನುಷ್ಯ ಅದೆಷ್ಟೇ ಬಲಶಾಲಿಯಾಗಿರಲಿ, ವೈಜ್ಞಾನಿಕವಾಗಿ, ಅಭಿವೃದ್ಧಿಗೊಳ್ಳಲಿ ಮತ್ತೊಬ್ಬ ಮನುಷ್ಯನ ಹಕ್ಕುಗಳನ್ನು ಅರಿಯದಿದ್ದರೆ ಹೇಳಿಕೊಳ್ಳುವ ಅಭಿವೃದ್ಧಿಗಳೆಲ್ಲಾ ಮಣ್ಣುಪಾಲು. ನಮ್ಮ ಹಕ್ಕುಗಳಾಚರಣೆಯಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು. ಒಬ್ಬ ವ್ಯಕ್ತಿ ತನ್ನ ವಾಹನವನ್ನು ತಪ್ಪಾಗಿ ಚಲಾಯಿಸಿದರೆ, ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಅತೀ ಹೆಚ್ಚಿನ ಡಿಜೆ ಸೌಂಡ್‌ಬಳಸಿದರೆ ಅಕ್ಕಪಕ್ಕದವರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ನಾವು ಹೀಗೆ ಅದೆಷ್ಟು ಮಾನವ ಹಕ್ಕುವಳನ್ನು ಹಾಳು ಮಾಡಿಬಿಡುತ್ತೇವೆ ಎಂದು ಒಮ್ಮೆಯಾದರೂ ಚಿಂತಿಸಿದ್ದೇವೆಯೇ? ಇಂತಹ ಚಿಕ್ಕ ಪುಟ್ಟ ಅಪರಾಧಗಳೇ ಮುಂದೆ ದೊಡ್ಡ ದೊಡ್ಡ ಅನಾಹುತಗಳಿಗೆ ಕಾರಣವಾಗಿ ಬಿಡುತ್ತವೆ.
ಅನಗತ್ಯವಾದ ಜಾತಿ ಧರ್ಮ ಲಿಂಗ, ಭಾಷೆಗಳ ಆಧಾರದಲ್ಲಿ ಅಂಧಾಭಿಮಾನದಿಂದ ಇನ್ನೊಬ್ಬರಿಗೆ ತೊಂದರೆಯುಂಟು ಮಾಡಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಬದಲು ನಾವೂ ನೆಮ್ಮದಿಯಿಂದ ಬದುಕಬೇಕಾದರೆ ಮೊದಲು ಇನ್ನೊಬ್ಬರ ಹಕ್ಕುಗಳ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೂ ಆ ಹಕ್ಕುಗಳ ವಿರುದ್ಧ ನಡೆಯದಂತೆ ನಮ್ಮ ನಡತೆಯನ್ನು ಮಿತಿಗೊಳಿಸಿಕೊಂಡರೆ ಸಾಕು. ಆಗ ಮಾತ್ರ ಮಾನವ ಹಕ್ಕುಗಳಿಗೆ ಬೆಲೆ ದೊರೆಯುವಂತಾಗುತ್ತದೆ.

ಫರ್ಹಾನಾಜ಼್ ಮಸ್ಕಿ
ಸಾಹಿತಿಗಳು & ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು
ನೆಲಮಂಗಲ.

Leave a Reply

Your email address will not be published. Required fields are marked *