ಲಿಂಗಸೂಗೂರಿನ 13 ಮಸ್ಜಿದ್ ಕಮಿಟಿಗಳಿಗೆ ರಾಯಚೂರು ಜಿಲ್ಲಾ ವಕ್ಫ್ ಮಂಡಳಿಯಿಂದ ಬುಲಾವ್

ಅಂಜುಮನ್ ಕಮಿಟಿ ನೀಡಿದ ದೂರಿನ ಹಿನ್ನೆಲೆಯಲ್ಲಿ ನ.19ರಂದು ಮೀಟಿಂಗ್ ಗೆ ಹಾಜರಾಗಲು ನೋಟಿಸ್

ಲಿಂಗಸೂಗೂರ: ಲಿಂಗಸೂಗೂರ ಪುರಸಭೆ ವ್ಯಾಪ್ತಿಯಲ್ಲಿರುವ ಮಸ್ಜಿದ್ ಕಮಿಟಿಗಳ ಆಡಳಿತಾತ್ಮಕ ಕಾರ್ಯವೈಖರಿ, ಆರ್ಥಿಕ ವ್ಯವಹಾರಗಳು ಹಾಗೂ ಲಿಂಗಸೂಗೂರ ತಾಲೂಕಿನಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳು ತನಿಖಾ ಪ್ರಕ್ರಿಯೆಗೆ ಮುಂದಾಗಿದ್ದಾರೆ.

ಮಸ್ಜಿದ್ ಕಮಿಟಿಗಳ ಆಡಳಿತ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವ ಜೊತೆಗೆ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅವುಗಳ ಸಮರ್ಪಕ ನಿರ್ವಹಣೆ ಕುರಿತು ಪರಿಶೀಲನೆ ನಡೆಸಬೇಕು. ಅಲ್ಲದೆ, ಅಂಜುಮನ್ ಕಮಿಟಿಯ ವತಿಯಿಂದ ಸಮಾಜದ ಹಿತದೃಷ್ಟಿಯಿಂದ ಕೈಗೊಳ್ಳಲಾಗುವ ಸಾಮಾಜಿಕ ಕಳಕಳಿಯುಳ್ಳ ಎಲಾನ್‌ಗಳು (ಘೋಷಣೆಗಳು) ಮತ್ತು ಪ್ರಕಟಣೆಗಳನ್ನು ದುರುದ್ದೇಶಪೂರ್ವಕವಾಗಿ ತಡೆಹಿಡಿಯಲಾಗುತ್ತಿದೆ ಎಂಬ ಆರೋಪದ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂಜುಮನ್ ಕಮಿಟಿಯು ದಿನಾಂಕ 15-10-2026ರಂದು ರಾಯಚೂರು ಜಿಲ್ಲಾ ವಕ್ಫ್ ಮಂಡಳಿ ಕಚೇರಿಗೆ ಅಧಿಕೃತ ದೂರು ಸಲ್ಲಿಸಿತ್ತು.

ಈ ದೂರನ್ನು ಪರಿಗಣಿಸಿರುವ ರಾಯಚೂರು ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳು ದಿನಾಂಕ 12-11-2026ರಂದು ತಮ್ಮ ಸಿಬ್ಬಂದಿಯ ಮೂಲಕ ಲಿಂಗಸೂಗೂರ ಪುರಸಭೆ ವ್ಯಾಪ್ತಿಗೆ ಒಳಪಡುವ ಒಟ್ಟು 13 ಮಸ್ಜಿದ್ ಕಮಿಟಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅದರಂತೆ ದಿನಾಂಕ 19-11-2026ರಂದು ಬೆಳಿಗ್ಗೆ 11:30 ಗಂಟೆಗೆ ಸಂಬಂಧಪಟ್ಟ ಎಲ್ಲಾ ಮಸ್ಜಿದ್ ಕಮಿಟಿಗಳ ಪದಾಧಿಕಾರಿಗಳು ಮೀಟಿಂಗ್ ಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಅಂಜುಮನ್ ಗೌರವಾಧ್ಯಕ್ಷ ಜನಾಬ್ ಅನ್ಸರುದ್ದಿನ್ ಅವರ ಹೇಳಿಕೆ:

“ವಕ್ಫ್ ಆಸ್ತಿಗಳು ಮತ್ತು ಮಸ್ಜಿದ್‌ಗಳು ಸಮುದಾಯದ ಅಮೂಲ್ಯ ಧಾರ್ಮಿಕ ಹಾಗೂ ಸಾರ್ವಜನಿಕ ಆಸ್ತಿಗಳಾಗಿವೆ. ಅವುಗಳ ನಿರ್ವಹಣೆ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಯಾವುದೇ ವ್ಯಕ್ತಿ ಅಥವಾ ಸಮಿತಿಯು ಸಾರ್ವಜನಿಕ ನಂಬಿಕೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಬಾರದುಅಂಜುಮನ್ ಕಮಿಟಿಯು ಯಾರ ವಿರುದ್ಧವೂ ವೈಯಕ್ತಿಕ ದ್ವೇಷದಿಂದ ದೂರು ನೀಡಿಲ್ಲ. ಬದಲಾಗಿ, ವಕ್ಫ್ ಆಸ್ತಿಗಳ ರಕ್ಷಣೆ, ಮಸ್ಜಿದ್‌ಗಳ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಕಾನೂನುಬದ್ಧವಾಗಿ ಹೋರಾಟ ನಡೆಸುತ್ತಿದೆ.

ನಮ್ಮ ಕಮಿಟಿಯ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳು ಹಾಗೂ ಘೋಷಣೆಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸತ್ಯಾಸತ್ಯತೆ ಹೊರಬಂದು ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ಜರುಗಬೇಕು. ವಕ್ಫ್ ಮಂಡಳಿಯ ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ತನಿಖೆಯು ಯಾವುದೇ ಒತ್ತಡ, ಪ್ರಭಾವ ಅಥವಾ ಪಕ್ಷಪಾತಕ್ಕೆ ಒಳಗಾಗದೆ ನ್ಯಾಯಸಮ್ಮತವಾಗಿ ನಡೆಯಬೇಕು ಎಂಬುದು ನಮ್ಮ ಆಶಯವಾಗಿದೆ,” ಎಂದು ತಿಳಿಸಿದರು.

Leave a Reply

Your email address will not be published. Required fields are marked *