ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಶನ್ ವತಿಯಿಂದ ನವೆಂಬರ್ 13ರಂದು “ಊರ ಜನರ ನಡಿಗೆ ಮಕ್ಕಳ ಕಲಿಕೆಯ ಕಡೆಗೆ” ಎಂಬ ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗೀಯ ಕ್ಷೇತ್ರ ವ್ಯವಸ್ಥಾಪಕರಾದ ಶ್ರೀ ಅಡಿವೇಶಪ್ಪ ನೀರಲಕೇರಿ ಅವರು, ಸರ್ಕಾರಿ ಶಾಲಾ ಮಕ್ಕಳ ಗಣಿತ ಕಲಿಕೆಯ ಗುಣಮಟ್ಟ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಸುಧಾರಿಸುವಲ್ಲಿ ಸಮುದಾಯದ ಸಕ್ರಿಯ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ರವಿ ಕುಮಾರ್ ಪೋಷಕರನ್ನು ಉದ್ದೇಶಿಸಿ ಮಾತನಾಡಿ,ಮಕ್ಕಳ ಕಲಿಕೆಯಲ್ಲಿ ಪೋಷಕರು ಮತ್ತು ಸಮುದಾಯದ ಪಾತ್ರದ ಮಹತ್ವವನ್ನು ತಿಳಿಸಿದರು

ಕಾರ್ಯಕ್ರಮದಲ್ಲಿ ತಾಯಂದಿರು, ಪುರುಷರು, ಯುವತಿಯರು ಮತ್ತು ಯುವಕರಿಗೆ ಪ್ರತ್ಯೇಕವಾಗಿ ಗಣಿತ ಚಟುವಟಿಕೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಒಟ್ಟು 115 ಜನರು ನೋಂದಣಿ ಮಾಡಿಕೊಂಡಿದ್ದು, 96 ಜನರು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ನವೆಂಬರ್ 13ರಂದು ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಾಲ್ಕು ವರ್ಗಗಳಿಂದ ಆಯ್ಕೆಯಾದ 12 ವಿಜೇತರಿಗೆ ಅಭಿನಂದನಾ ಪತ್ರ, ಪುಸ್ತಕಗಳು ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ವಿಭಾಗೀಯ ಕ್ಷೇತ್ರ ವ್ಯವಸ್ಥಾಪಕರಾದ ಅಡಿವೇಶಪ್ಪ,ಪ್ರಭಾರಿ ಮುಖ್ಯ ಗುರುಗಳಾದ ರವಿ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷರಾದ ಮಹಿಬೂಬ್,ಎಸ್‌ಡಿಎಂಸಿ ಸದಸ್ಯರುಗಳಾದ ಪ್ರಕಾಶ್ ಮತ್ತು ಚನ್ನಪ್ಪಗೌಡ, MBK ಕಾರ್ಯದರ್ಶಿಯಾದ ಸೈಜಾದಿ ಬೇಗಂ, ಅಕ್ಷರ ಫೌಂಡೇಶನ್‌ನ ಜಿಲ್ಲಾ ಸಂಯೋಜಕರಾದ ಬಸವರಾಜ್ ಮತ್ತು ವಲಯ ಸಂಯೋಜಕರಾದ ಶಿವರಾಜ್ ನಾಯಕ್ ಹಾಗೂ ಅತಿಥಿ ಶಿಕ್ಷಕರಾದ ಹನುಮಂತರಾಯ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಂದಿನ ಹಂತವಾಗಿ ನಾಲ್ಕು ವರ್ಗಗಳಿಂದ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೊಂದಿರುವ 20 ಜನರನ್ನು ಸಮುದಾಯದ ಕಲಿಕಾ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಲಾಯಿತು. ಇವರ ಮೂಲಕ ಮಕ್ಕಳ ಕಲಿಕಾ ಪ್ರಗತಿಗೆ ನಿರಂತರ ಸಹಕಾರ ನೀಡಲು ಹಾಗೂ ಗ್ರಾಮದಲ್ಲಿ ಕಲಿಕಾ ಸ್ನೇಹಿ ವಾತಾವರಣ ನಿರ್ಮಿಸಲು ಉದ್ದೇಶಿಸಲಾಗಿದೆ.

Leave a Reply

Your email address will not be published. Required fields are marked *