ಸಿಂಧನೂರು: “ಪರಿಸರ ನಮ್ಮೆಲ್ಲರ ಉಸಿರಾಗಿದ್ದು, ಅದೇ ನಮ್ಮ ನೈಜ ಗುರುವಾಗಿದೆ. ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರವು ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಪ್ರತಿ ವರ್ಷ ಆಚರಿಸುವ ರಕ್ಷಾ ಬಂಧನವನ್ನು ‘ವೃಕ್ಷ ಬಂಧನ’ವನ್ನಾಗಿ ಆಚರಿಸುವ ಮೂಲಕ ಗಿಡ-ಮರಗಳನ್ನು ಪೋಷಿಸುವ ಸಂಕಲ್ಪ ಮಾಡಬೇಕು” ಎಂದು ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಅಮರೇಗೌಡ ಮಲ್ಲಾಪುರ ಕರೆ ನೀಡಿದರು.

ತಾಲ್ಲೂಕಿನ ಅಲಬನೂರು ಗ್ರಾಮದಲ್ಲಿ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾಗಿರುವ 2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ (NSS) ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, “ಪ್ರಕೃತಿ ರಕ್ಷಣೆ ಮತ್ತು ನಾಳೆಯ ಭವಿಷ್ಯ” ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಶ್ರೀ ಶಿವರಾಜ ಅಡಗಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಡಶಿರವಾರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ವೀರೇಶ ಹಿರೇಮಠ ಹಾಗೂ ‘ಪ್ರಜಾ ಸೇನೆ’ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಶ್ರೀ ನಾಗರಾಜ ಬೊಮ್ಮನಾಳ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಪಂಪಾಪತಿ ಕಲ್ಮಂಗಿ, ಶ್ರೀ ಮೌನೇಶ ಬಳಗಾನೂರು ಹಾಗೂ ಶಿಬಿರಾಧಿಕಾರಿ ರವಿ ಬಿ. ಸಾಸಲಮರಿ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಚೈತ್ರಾ ಬೆಳಗುರ್ಕಿ ಮತ್ತು ಬಸವಂತಿ ಅಲಬನೂರು ಎನ್‌ಎಸ್‌ಎಸ್ ಗೀತೆಯನ್ನು ಪ್ರಸ್ತುತಪಡಿಸಿದರು. ಅಮೃತಾ ಹರೇಟನೂರು ಮತ್ತು ಭೀಮನಗೌಡ ಸ್ವಾಗತ ಕೋರಿದರು. ಕುವೆಂಪು ತಂಡದ ನಾಯಕಿ ಶ್ರೀದೇವಿ ಎಂ. ಹರೇಟನೂರು ಕಾರ್ಯಕ್ರಮ ನಿರೂಪಿಸಿದರೆ, ಪರಶುರಾಮ ಹರೇಟನೂರು ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *