ತಾಳಿಕೋಟೆ: ಬೆಂಕಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವುದರ ಜೊತೆಗೆ ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆ ಮಾಡುವ ಮಹತ್ತರ ಜವಾಬ್ದಾರಿಯನ್ನು ಅಗ್ನಿಶಾಮಕ ದಳ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ತಾಳಿಕೋಟಿ ಅಗ್ನಿಶಾಮಕ ಠಾಣೆಯು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿಯೂ ನಿರಂತರ ತುರ್ತು ಸೇವೆ ಸಲ್ಲಿಸುತ್ತಿದೆ.
ಹಲವು ವರ್ಷಗಳ ಕಾಲ ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದಲ್ಲಿದ್ದ ಹಳೆಯ ಕಟ್ಟಡದಲ್ಲಿ ಸೀಮಿತ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಅಗ್ನಿಶಾಮಕ ಠಾಣೆಗೆ ಇದೀಗ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಕಳೆದ ನಾಲ್ಕೈದು ತಿಂಗಳಿಂದ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಹೊಸ ಕಟ್ಟಡದಿಂದ ಕಾರ್ಯನಿರ್ವಹಣೆಗೆ ಕೊಂಚ ಅನುಕೂಲವಾಗಿದ್ದರೂ ಸಿಬ್ಬಂದಿ ಕೊರತೆ, ವಸತಿ ಗೃಹಗಳ ಅಲಭ್ಯತೆ ಹಾಗೂ ಕಟ್ಟಡ ಕಾಮಗಾರಿಯ ಗುಣಮಟ್ಟದ ಕುರಿತು ಕೇಳಿಬರುತ್ತಿರುವ ಆರೋಪಗಳು ಇಲಾಖೆಯ ಸಮಸ್ಯೆಗಳನ್ನು ಮತ್ತೆ ಮುನ್ನೆಲೆಗೆ ತಂದಿವೆ.
23 ಹುದ್ದೆಗಳಿಗೆ 20 ಸಿಬ್ಬಂದಿ:
ತಾಳಿಕೋಟಿ ಅಗ್ನಿಶಾಮಕ ಠಾಣೆಗೆ ಒಟ್ಟು 23 ಸಿಬ್ಬಂದಿ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 20 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರು ಹುದ್ದೆಗಳು ಖಾಲಿ ಉಳಿದಿವೆ. ಲಭ್ಯವಿರುವ ಸಿಬ್ಬಂದಿಯೇ ದಿನದ 24 ಗಂಟೆಗಳ ಕಾಲ ತುರ್ತು ಕರೆಗಳು, ಅಗ್ನಿ ಅವಘಡಗಳು, ರಕ್ಷಣಾ ಕಾರ್ಯಾಚರಣೆಗಳು ಹಾಗೂ ಠಾಣೆಯ ದೈನಂದಿನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ. ತುರ್ತು ಸೇವೆಯ ಮಹತ್ವವನ್ನು ಪರಿಗಣಿಸಿ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರ್ಷಕ್ಕೆ 85ರಿಂದ 105 ತುರ್ತು ಕಾರ್ಯಾಚರಣೆ:
ನಗರದ ಅಗ್ನಿಶಾಮಕ ಠಾಣೆಯ ವ್ಯಾಪ್ತಿಯಲ್ಲಿ ವರ್ಷಕ್ಕೆ ಸರಾಸರಿ 85ರಿಂದ 105 ಅಗ್ನಿ ಅವಘಡಗಳು ಹಾಗೂ ವಿವಿಧ ತುರ್ತು ಕಾರ್ಯಾಚರಣೆಗಳು ವರದಿಯಾಗುತ್ತಿವೆ. ಪಟ್ಟಣವಷ್ಟೇ ಅಲ್ಲದೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೂ ಈ ಠಾಣೆಯೇ ಪ್ರಮುಖ ರಕ್ಷಣಾ ಕೇಂದ್ರವಾಗಿದೆ.
ಮನೆ, ಅಂಗಡಿ, ಗೋದಾಮು, ಹೊಲ-ಗದ್ದೆಗಳಲ್ಲಿ ಬೆಳೆಗಳಿಗೆ ಬೆಂಕಿ ತಗುಲಿದ ಸಂದರ್ಭ ಹಾಗೂ ವಿದ್ಯುತ್ ಅವಘಡಗಳ ಸಂದರ್ಭದಲ್ಲಿ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಸ್ತುತ ಠಾಣೆಯಲ್ಲಿ ಎರಡು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಗೆ ಸಜ್ಜಾಗಿವೆ.
ಸಿಬ್ಬಂದಿಗೆ ವಸತಿ ಗೃಹಗಳ ಅಗತ್ಯ:
ಅಗ್ನಿ ಅವಘಡಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಕಾರಣ ಅಗ್ನಿಶಾಮಕ ಸಿಬ್ಬಂದಿ ಸದಾ ಸನ್ನದ್ಧರಾಗಿರಬೇಕಾಗುತ್ತದೆ. ಮಧ್ಯರಾತ್ರಿ ಸೇರಿದಂತೆ ಅನಿರೀಕ್ಷಿತ ಸಮಯದಲ್ಲಿ ತುರ್ತು ಕರೆ ಬಂದಾಗ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವುದು ಅನಿವಾರ್ಯ. ಆದರೆ ಠಾಣೆಯ ಸಮೀಪ ಸಿಬ್ಬಂದಿಗೆ ವಸತಿ ಗೃಹಗಳ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ. ಹೀಗಾಗಿ ನೂತನ ಅಗ್ನಿಶಾಮಕ ಠಾಣೆಯ ಆವರಣದಲ್ಲಿಯೇ ಸಿಬ್ಬಂದಿಗೆ ಅಗತ್ಯ ವಸತಿ ಗೃಹಗಳನ್ನು ನಿರ್ಮಿಸಿಕೊಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ನೂತನ ಕಟ್ಟಡದ ಕಾಮಗಾರಿ ಕಳಪೆ: ಕರವೇ ಆರೋಪ
ತಾಳಿಕೋಟಿ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡದ ಕಾಮಗಾರಿಯ ಗುಣಮಟ್ಟದ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರವೀಂದ್ರ ಕುಮಾರ ಕಟ್ಟಿಮನಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನೂತನ ಅಗ್ನಿಶಾಮಕ ಠಾಣೆ ಆರಂಭವಾಗಿ ಕೇವಲ ನಾಲ್ಕೈದು ತಿಂಗಳು ಕಳೆದಿದ್ದರೂ ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಕಂಡುಬರುತ್ತಿದೆ. ಶೌಚಾಲಯಗಳು, ಕೊಠಡಿಗಳು ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ಕಾಮಗಾರಿ ಸಮರ್ಪಕವಾಗಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಕಟ್ಟಡದ ಕಾಮಗಾರಿಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ:
“ತಾಳಿಕೋಟಿ ಅಗ್ನಿಶಾಮಕ ಠಾಣೆಗೆ ಒಟ್ಟು 23 ಸಿಬ್ಬಂದಿ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 20 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರು ಹುದ್ದೆಗಳು ಖಾಲಿ ಇವೆ. ಎರಡು ಅಗ್ನಿಶಾಮಕ ವಾಹನಗಳ ಮೂಲಕ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬರುವ ತುರ್ತು ಕರೆಗಳಿಗೆ ತಕ್ಷಣ ಸ್ಪಂದಿಸಲಾಗುತ್ತಿದೆ. ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವುದು ಅನುಕೂಲಕರವಾಗಿದೆ. ಸಿಬ್ಬಂದಿಗೆ ವಸತಿ ಗೃಹಗಳು ಹಾಗೂ ಅಗತ್ಯ ಪರಿಕರಗಳು ದೊರೆತರೆ ಕಾರ್ಯಾಚರಣೆ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತದೆ.”
— ಸರ್ಪರಾಜ್ ಕಂದಗಲ್, ಪ್ರಭಾರಿ ಅಗ್ನಿಶಾಮಕ ಠಾಣಾಧಿಕಾರಿ, ತಾಳಿಕೋಟೆ.
ಸೌಲಭ್ಯ ಕಲ್ಪಿಸಲು ಸಾರ್ವಜನಿಕರ ಒತ್ತಾಯ:
ಒಟ್ಟಿನಲ್ಲಿ ಜನ-ಜಾನುವಾರುಗಳ ಜೀವ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಾಳಿಕೋಟಿ ಅಗ್ನಿಶಾಮಕ ದಳಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಅವಶ್ಯವಾಗಿದೆ. ನೂತನ ಕಟ್ಟಡದ ಕಾಮಗಾರಿಯ ಗುಣಮಟ್ಟದ ಕುರಿತು ಕೇಳಿಬಂದಿರುವ ಆರೋಪಗಳ ಪರಿಶೀಲನೆ, ಖಾಲಿ ಹುದ್ದೆಗಳ ಭರ್ತಿ ಹಾಗೂ ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಆದ್ಯತೆ ನೀಡಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.
ಫೋಟೋ ಶೀರ್ಷಿಕೆ: ತಾಳಿಕೋಟಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಅಗ್ನಿಶಾಮಕ ಠಾಣೆ ಹಾಗೂ ತುರ್ತು ಕಾರ್ಯಾಚರಣೆಗೆ ಸನ್ನದ್ಧವಾಗಿರುವ ಅಗ್ನಿಶಾಮಕ ವಾಹನಗಳು.
