ಕಂಪ್ಲಿ: ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ತೆರಳಲು, ಮನೆಗೆ ಹಿಂದಿರುಗಸಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಕಂಪ್ಲಿ ತಾಲೂಕಿನ ನೆಲ್ಲುಡಿ ಕೊಟ್ಟಾಲ್ ಬಳಿಯ ಶಂಕರ್‌ಸಿಂಗ್ ಕ್ಯಾಂಪಗೆ ತೆರಳುವ ಕುರುಗೋಡು-ಕಂಪ್ಲಿ ಮುಖ್ಯರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಇಲ್ಲಿನ ಸಣಾಪುರ ಗ್ರಾಪಂ ವ್ಯಾಪ್ತಿಯ ನಂ.2 ಮುದ್ದಾಪುರ ಗ್ರಾಮಕ್ಕೆ ಒಂದು ದಿನ ಬಿಟ್ಟು, ಒಂದು ದಿನದ ನಂತರ ಸಾರಿಗೆ ಬರುತ್ತಿರುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳಲು ತುಂಬಾ ಸಮಸ್ಯೆಯಾಗುತ್ತಿದೆ. ಬಸ್ ಬಾರದಿದ್ದರೆ ಇಲ್ಲಿನ ಮುದ್ದಾಪುರದಿಂದ ದೂರದ ನೆಲ್ಲುಡಿ ಕ್ರಾಸ್‌ವರೆಗೆ ಕಾಲ್ನಡಿಗೆ ಮೂಲಕ ತೆರಳಿ, ಅಲ್ಲಿ ತಾಸು ಗಟ್ಟಲೇ ನಿಂತರೂ, ಬಸ್ ಬರುವುದಿಲ್ಲ. ಮತ್ತು ಬಂದರೂ ಶಕ್ತಿ ಯೋಜನೆಯಲ್ಲಿ ಮಹಿಳೆಯರನ್ನು ತುಂಬಿಕೊಂಡು, ನಿಲ್ಲಿಸದೇ, ತೆರಳುತ್ತವೆ. ಹೀಗಾಗಿ ಕಲಿಕೆಗಾಗಿ ಶಾಲಾ-ಕಾಲೇಜುಗಳಿಗೆ ಹೋಗಿ, ಬರಲು ಸಮಸ್ಯೆ ತಂದೊಡ್ಡಿದೆ. ನೆಲ್ಲುಡಿ ಕೊಟ್ಟಾಲ್ ಮಾರ್ಗವಾಗಿ ಕಂಪ್ಲಿ, ಕುರುಗೋಡು, ಬಳ್ಳಾರಿ, ಹೊಸಪೇಟೆ, ಗಂಗಾವತಿ ಸೇರಿದಂತೆ ವಿವಿಧೆಡೆಗೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪ್ರಯಾಣ ಮಾಡುತ್ತಾರೆ.
ಇಲ್ಲಿನ ಶಂಕರ್ ಸಿಂಗ್ ಕ್ಯಾಂಪ್ ರಸ್ತೆ ಬಸ್ ನಿಲ್ದಾಣ ಬಳಿಯಲ್ಲಿ ಗಂಟೆಗಂಟೆಲೇ ಕಾದರೂ ಬಸ್ ಬರುವುದಿಲ್ಲ. ಮತ್ತು ಆಗೊಮ್ಮೆ ಈಗೊಮ್ಮೆ ಬಂದರೂ ನಿಲ್ಲಿಸುವುದಿಲ್ಲ. ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಇಲ್ಲದಂತಾಗಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆಳಲು ತೋಡಿಕೊಂಡರು.
ನಂತರ ವಿದ್ಯಾರ್ಥಿ ಅರ್.ಮಲ್ಲಿಕಾರ್ಜುನ ಮಾತನಾಡಿ, ಇಲ್ಲಿನ ಮುದ್ದಾಪುರ ಗ್ರಾಮಕ್ಕೆ ಒಂದು ದಿನ ಬಿಟ್ಟು, ಒಂದು ದಿನ ಸಾರಿಗೆ ಬಸ್ ಬರುವುದರಿಂದ ವಿದ್ಯಾಭ್ಯಾಸಕ್ಕೆ ಅಡಚಣೆಯಾಗುತ್ತದೆ. ಪ್ರತಿ ದಿನ ಸರಿಯಾದ ಸಮಯಕ್ಕೆ ಬಸ್ ಇಲ್ಲ. ಇದರಿಂದ ದಿನನಿತ್ಯದಲ್ಲಿ ಇಲ್ಲಿನ 60-65 ವಿದ್ಯಾರ್ಥಿಗಳ ಶಿಕ್ಷಣಕ್ಕೆ ತುಂಬ ಸಮಸ್ಯೆಯಾಗುತ್ತಿದೆ. ಶಾಲಾ-ಕಾಲೇಜು ಬಿಟ್ಟರೆ, ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ಮನೆಗೆ ಹೋಗಲು ರಾತ್ರಿ ತಡವಾಗಿ ಆಗುತ್ತಿದೆ. ಇದರಿಂದ ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರವು ಶಾಲಾ-ಕಾಲೇಜು ಆರಂಭವಾಗುವ, ಬಿಡುವ ಸಮಯಕ್ಕೆ ಹೆಚ್ಚುವರಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ನವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಸಂಬಂಧಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.
ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಬಿ.ಶಿವಾನಂದ, ಬಿ.ಸುಧೀರ್, ವಿಜಯಕುಮಾರ, ಸುನೀಲ, ನಂದಿನಿ, ಸ್ವಪ್ನ, ಸಂಜನ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *