ಕೊಪ್ಪಳ: ಕೊಪ್ಪಳದ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಿದ್ದು, ಮಹಾದಾಸೋಹಕ್ಕೆ ಅಗತ್ಯವಿರುವ ಕಟ್ಟಿಗೆ ಸಂಗ್ರಹಿಸುವ ಕಾರ್ಯದಲ್ಲಿ ಖುದ್ದು ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರಮದಾನ ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದಾರೆ.
ಮುಂಬರುವ ಜನವರಿ ತಿಂಗಳಲ್ಲಿ ನಡೆಯಲಿರುವ ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮಹಾದಾಸೋಹಕ್ಕೆ ಬೇಕಾಗುವ ಕಟ್ಟಿಗೆಗಳನ್ನು ಕೂಡಿಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳೇ ಮರದ ದಿಮ್ಮಿಗಳನ್ನು ಹೊತ್ತು ಸೇವೆಯಲ್ಲಿ ತೊಡಗಿಸಿಕೊಂಡರು.
ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಜಾತ್ರಾ ಮಹೋತ್ಸವದಲ್ಲಿ ಮಹಾದಾಸೋಹ ಪ್ರಮುಖ ಆಕರ್ಷಣೆಯಾಗಿದ್ದು, ಭಕ್ತರಿಗೆ ಅನ್ನಪ್ರಸಾದ ವಿತರಿಸಲು ಅಗತ್ಯ ಸಿದ್ಧತೆಗಳನ್ನು ಮಠದಲ್ಲಿ ಕೈಗೊಳ್ಳಲಾಗುತ್ತಿದೆ. ಶ್ರೀಗಳು ಕಾರ್ಮಿಕರೊಂದಿಗೆ ಕೈಜೋಡಿಸಿ ಶ್ರಮದಾನ ಮಾಡುತ್ತಿರುವುದು ಅವರ ಸರಳತೆ, ಸೇವಾ ಮನೋಭಾವ ಹಾಗೂ ಕಾಯಕನಿಷ್ಠೆಗೆ ಸಾಕ್ಷಿಯಾಗಿದೆ.
ಶ್ರೀಗಳ ಈ ಶ್ರಮದಾನ ಭಕ್ತರಲ್ಲಿ ಮೆಚ್ಚುಗೆ ಮೂಡಿಸಿದ್ದು, ಸೇವೆಯೇ ಪರಮ ಧರ್ಮ ಎಂಬ ಸಂದೇಶವನ್ನು ಸಾರಿದೆ.
