ದೇವದುರ್ಗ, ನ. 11: ಬಿಸಿಯೂಟ ಯೋಜನೆಯಡಿ ಸೆಂಟ್ರಲ್ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೊಳಿಸುವ ಪ್ರಸ್ತಾಪವನ್ನು ಕೈಬಿಟ್ಟು, ಶಾಲೆಗಳಲ್ಲಿಯೇ ಅಡುಗೆ ಸಿಬ್ಬಂದಿಯಿಂದ ಊಟ ತಯಾರಿಸುವ ವ್ಯವಸ್ಥೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಪದಾಧಿಕಾರಿಗಳು ಬುಧವಾರ ಪಟ್ಟಣದಲ್ಲಿ ಬಿಇಒ ರಾಧಾದೇವಿ ಅವರಿಗೆ ಮನವಿ ಸಲ್ಲಿಸಿದರು.
ಬಿಸಿಯೂಟ ಯೋಜನೆಯು 2001ರಿಂದ ಜಾರಿಯಲ್ಲಿದ್ದು, ಸರ್ಕಾರಿ ಶಾಲಾ ಮಕ್ಕಳ ಹಸಿವು ನೀಗಿಸುವುದರ ಜೊತೆಗೆ ಮಕ್ಕಳ ಗ್ರಹಿಕಾ ಸಾಮರ್ಥ್ಯ ಮತ್ತು ಶಾಲಾ ಹಾಜರಾತಿ ಹೆಚ್ಚಿಸಲು ಸಹಕಾರಿಯಾಗಿದೆ. ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಅವರು ಕಲಿಯುವ ಶಾಲೆಯಲ್ಲಿಯೇ ತಾಜಾ ಹಾಗೂ ಪೌಷ್ಟಿಕ ಆಹಾರ ತಯಾರಿಸಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲೆಗಳಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಇಂತಹ ಸಂದರ್ಭದಲ್ಲಿ ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ಸಂಘದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಬಿಸಿಯೂಟ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಶಿಕ್ಷಕರಿಗೆ ವಹಿಸುವ ಬದಲು ಅಡುಗೆ ಸಿಬ್ಬಂದಿಗೆ ನೀಡಬೇಕು. ಅಡುಗೆ ಸಿಬ್ಬಂದಿ ಮತ್ತು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷರ ಜಂಟಿ ಖಾತೆಯ ಮೂಲಕ ಹಣಕಾಸಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಬೇಕು. ಅಗತ್ಯವಿದ್ದರೆ ಅಡುಗೆ ಸಿಬ್ಬಂದಿಯ ಕೆಲಸದ ಅವಧಿಯನ್ನು ವಿಸ್ತರಿಸಬೇಕು. ಸಿಬ್ಬಂದಿಯೇ ಶಾಲೆಗಳಲ್ಲಿ ಅಡುಗೆ ತಯಾರಿಸುವ ವ್ಯವಸ್ಥೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸೆಂಟ್ರಲ್ ಕ್ಲಸ್ಟರ್ ಕಿಚನ್ ವ್ಯವಸ್ಥೆಯಿಂದ ಬಿಸಿಯೂಟ ಸಿಬ್ಬಂದಿಯ ಉದ್ಯೋಗಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯಿದ್ದು, ಆಹಾರ ತಯಾರಿಕೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಹಾಗೂ ಧಾರ್ಮಿಕ ಮತ್ತು ಜಾತಿ ಆಧಾರಿತ ತಾರತಮ್ಯಕ್ಕೆ ಅವಕಾಶ ಕಲ್ಪಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ತಕ್ಷಣವೇ ಕ್ಲಸ್ಟರ್ ಕಿಚನ್ ಪದ್ಧತಿಯನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಹಾಗೂ ಗೌರವ ಅಧ್ಯಕ್ಷ ಗಿರಿಯಪ್ಪ ಪೂಜಾರಿ, ಸಂಘದ ಅಧ್ಯಕ್ಷೆ ಮರಿಯಮ್ಮ, ಕಾರ್ಯದರ್ಶಿ ಶ್ರೀಲೇಖಾ, ಲಕ್ಷ್ಮಿ, ಮಂಜುಳಾ, ರತ್ನಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
