ತಾವರಗೇರಾ: ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ವರ್ಗ ಶೋಷಣೆ, ಲಿಂಗ ತಾರತಮ್ಯ, ಕೋಮುವಾದ, ನಿರುದ್ಯೋಗ ಹಾಗೂ ಬಂಡವಾಳಶಾಹಿ ಶೋಷಣೆಯ ವಿರುದ್ಧ ವಿದ್ಯಾರ್ಥಿ–ಯುವಜನರು ವೈಜ್ಞಾನಿಕ ಮನೋಭಾವ ಮತ್ತು ಪ್ರಗತಿಪರ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ (DVP) ಹಾಗೂ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ (RYFI) ಸಂಘಟನೆಗಳು ಕರೆ ನೀಡಿವೆ.

ದಲಿತ ವಿದ್ಯಾರ್ಥಿ ಪರಿಷತ್ (DVP) ಹಾಗೂ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ (RYFI) ಸಂಯುಕ್ತ ಆಶ್ರಯದಲ್ಲಿ ನವೆಂಬರ್ 7ರಿಂದ 9ರವರೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ವಿದ್ಯಾರ್ಥಿ–ಯುವಜನರ ವೈಚಾರಿಕ ಅಧ್ಯಯನ ಶಿಬಿರವು ಯಶಸ್ವಿಯಾಗಿ ಸಮಾರೋಪಗೊಂಡಿತು. ಸಮಾಜದಲ್ಲಿ ಶತಮಾನಗಳಿಂದ ಬೇರುಬಿಟ್ಟಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಶೋಷಣೆ ಹಾಗೂ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಸವಾಲುಗಳನ್ನು ವೈಜ್ಞಾನಿಕ ಮತ್ತು ಐತಿಹಾಸಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ ಮತ್ತು ಯುವಜನರಲ್ಲಿ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಚಿಂತನೆ, ಸಂವಿಧಾನಿಕ ಮೌಲ್ಯಗಳ ಅರಿವು ಹಾಗೂ ಸಾಮಾಜಿಕ ಬದಲಾವಣೆಯ ಜವಾಬ್ದಾರಿಯನ್ನು ಬೆಳೆಸುವುದು ಶಿಬಿರದ ಪ್ರಮುಖ ಆಶಯವಾಗಿತ್ತು.

ನವೆಂಬರ್ 7ರಂದು ತಾವರಗೇರಾ ಬುದ್ಧ ವಿಹಾರದಲ್ಲಿ ಹಲಗೆ ಬಡಿಯುವ ಮೂಲಕ ಹಾಗೂ ಸಸಿಗೆ ನೀರುಣಿಸುವ ಮೂಲಕ ಶಿಬಿರಕ್ಕೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ನಂತರ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸುವ ಮೂಲಕ ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಎತ್ತಿಹಿಡಿಯಲಾಯಿತು. DVP ರಾಯಚೂರು ಜಿಲ್ಲಾ ಸಂಚಾಲಕ ಕಾಮ್ರೇಡ್ ಮೌನೇಶ್ ಜಾಲವಾಡಗಿ ಅಧ್ಯಕ್ಷತೆ ವಹಿಸಿದ್ದರು. TUCI ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಆರ್. ಮಾನಸಯ್ಯ ಹಾಗೂ DVP ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರ್ ಉದ್ಘಾಟನಾ ನುಡಿಗಳನ್ನಾಡಿದರು. ಹಿರಿಯ ಹೋರಾಟಗಾರರಾದ ಅಂಬಣ್ಣ ಆರೋಲಿಕರ್, ಎಚ್.ಎನ್. ಬಡಿಗೇರ್, ಜನಕವಿ ದಾನಪ್ಪ ನಿಲೋಗಲ್, CPI(ML) Red Star ಕರ್ನಾಟಕ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ. ಗಂಗಾಧರ್, ವಿಜಯ ರಾಣಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಶಿಬಿರದ ಮೊದಲ ದಿನ ಮಾನವ ವಿಕಾಸದ ಇತಿಹಾಸ, ಮಾನವ ಸಮಾಜದ ಉಗಮ, ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ, ದಲಿತ ಚಳವಳಿಯ ಬೆಳವಣಿಗೆ ಹಾಗೂ ಅದರ ಮುಂದಿನ ಹಾದಿಯ ಕುರಿತು ಗಂಭೀರ ಚರ್ಚೆ ನಡೆಯಿತು. TUCI ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಆರ್. ಮಾನಸಯ್ಯ ಅವರು ವಿಷಯ ಮಂಡಿಸಿ, ಮಾನವ ಸಮಾಜದ ಬೆಳವಣಿಗೆಯನ್ನು ವೈಜ್ಞಾನಿಕ ಮತ್ತು ಐತಿಹಾಸಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಅಗತ್ಯವನ್ನು ವಿವರಿಸಿದರು. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಶೋಷಣೆ ಮತ್ತು ಅಸಮಾನತೆಗಳು ಹೇಗೆ ರೂಪುಗೊಂಡವು, ಅವುಗಳ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆ ಏನು ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಯಾವ ರೀತಿಯ ಬದಲಾವಣೆ ಅಗತ್ಯ ಎಂಬ ವಿಷಯಗಳ ಕುರಿತು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಸಮಾಜದ ಇತಿಹಾಸವನ್ನು ಕೇವಲ ರಾಜರು, ಸಾಮ್ರಾಜ್ಯಗಳು ಮತ್ತು ಯುದ್ಧಗಳ ಇತಿಹಾಸವಾಗಿ ನೋಡದೆ, ದುಡಿಯುವ ಜನರು, ಶೋಷಿತ ಸಮುದಾಯಗಳು ಮತ್ತು ಸಾಮಾಜಿಕ ಬದಲಾವಣೆಗಾಗಿ ನಡೆದ ಹೋರಾಟಗಳ ದೃಷ್ಟಿಯಿಂದಲೂ ಅರ್ಥಮಾಡಿಕೊಳ್ಳಬೇಕು ಎಂಬ ವಿಚಾರಕ್ಕೆ ಒತ್ತು ನೀಡಲಾಯಿತು.

ಎರಡನೇ ದಿನ ಭಾರತದ ಆಧುನಿಕ ರಾಜಕೀಯ ಚರಿತ್ರೆ, ಪ್ರಜಾಪ್ರಭುತ್ವದ ಬೆಳವಣಿಗೆ, ಭಾರತೀಯ ಸಂವಿಧಾನದ ಆಶಯಗಳು ಹಾಗೂ ಪ್ರಸ್ತುತ ಸಂವಿಧಾನದ ಮುಂದಿರುವ ಸವಾಲುಗಳ ಕುರಿತು ಅಧ್ಯಯನ ಮತ್ತು ಚರ್ಚೆ ನಡೆಯಿತು. ನಾರಾಯಣ ಬೆಳಗುರ್ಕಿ ಅವರು ಸಂವಿಧಾನದ ಪರಿಚಯ ಹಾಗೂ ಪ್ರಸ್ತುತ ಸವಾಲುಗಳ ಕುರಿತು ವಿಷಯ ಮಂಡಿಸಿದರು. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಘನತೆಯ ಬದುಕಿನ ಭರವಸೆಯನ್ನು ನೀಡಿದೆ. ಆದರೆ ಸಮಾಜದಲ್ಲಿ ಇಂದಿಗೂ ಜಾತಿ ತಾರತಮ್ಯ, ಧಾರ್ಮಿಕ ದ್ವೇಷ, ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅನ್ಯಾಯಗಳು ಮುಂದುವರಿದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಚರ್ಚಿಸಲಾಯಿತು. ಸಂವಿಧಾನದ ಪ್ರಜಾಸತ್ತಾತ್ಮಕ, ಜಾತ್ಯತೀತ ಮತ್ತು ಸಮಾನತೆಯ ಆಶಯಗಳನ್ನು ಕಾಪಾಡುವುದು ಕೇವಲ ರಾಜಕೀಯ ನಾಯಕರ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ವಿದ್ಯಾರ್ಥಿ, ಯುವಜನ ಮತ್ತು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂಬ ಸಂದೇಶವನ್ನು ನೀಡಲಾಯಿತು.

ಮೂರನೇ ದಿನದ ಪ್ರಮುಖ ಅಧಿವೇಶನದಲ್ಲಿ ‘ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನೆಗೆ ಹಾದಿ ಯಾವುದು?’ ಎಂಬ ಮಹತ್ವದ ವಿಷಯದ ಕುರಿತು ಉಪನ್ಯಾಸಕ ಹಾಗೂ ಹೋರಾಟಗಾರ ಚಂದ್ರಶೇಖರ್ ಗೊರೆಬಾಳ್ ಅವರು ವಿಷಯ ಮಂಡಿಸಿದರು. ಜಾತಿ ವ್ಯವಸ್ಥೆಯು ಕೇವಲ ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಯಲ್ಲ; ಅದು ಶತಮಾನಗಳಿಂದ ಮನುಷ್ಯರನ್ನು ಮೇಲು–ಕೀಳು ಎಂಬ ಭಾವನೆಯಿಂದ ವಿಭಜಿಸಿ, ಒಂದು ವರ್ಗದ ಜನರ ಮೇಲೆ ಮತ್ತೊಂದು ವರ್ಗದ ಜನರು ಶೋಷಣೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ವ್ಯವಸ್ಥೆಯಾಗಿದೆ ಎಂದು ವಿವರಿಸಿದರು. ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯಗಳು ಮಾನವ ಘನತೆಗೆ ವಿರುದ್ಧವಾದವು. ಇವುಗಳನ್ನು ಕೇವಲ ಕಾನೂನುಗಳ ಮೂಲಕ ಮಾತ್ರವಲ್ಲದೆ, ಜನರಲ್ಲಿ ವೈಜ್ಞಾನಿಕ ಮನೋಭಾವ, ಸಮಾನತೆಯ ಪ್ರಜ್ಞೆ ಮತ್ತು ಪ್ರಗತಿಪರ ಚಿಂತನೆ ಬೆಳೆಸುವ ಮೂಲಕ ನಿರ್ಮೂಲನೆ ಮಾಡಬೇಕಾಗಿದೆ. ಜಾತಿ ವ್ಯವಸ್ಥೆಯ ವಿರುದ್ಧ ವೈಚಾರಿಕ ಹೋರಾಟದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿಯೂ ಸಂಘಟಿತ ಹೋರಾಟ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಂತರ DVP ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರ್ ಅವರು ಪ್ರಸ್ತುತ ವಿದ್ಯಾರ್ಥಿ–ಯುವಜನರ ಮುಂದಿರುವ ಕಾರ್ಯಭಾರಗಳ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಕೇವಲ ತಮ್ಮ ವೈಯಕ್ತಿಕ ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಕನಸುಗಳಿಗೆ ಸೀಮಿತವಾಗದೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಶೋಷಣೆ ಮತ್ತು ತಾರತಮ್ಯಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ; ಸಮಾಜವನ್ನು ಅರ್ಥಮಾಡಿಕೊಂಡು ಅದನ್ನು ಉತ್ತಮ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದೂ ಆಗಿದೆ ಎಂದು ತಿಳಿಸಿದರು.

ಈ ಅಧ್ಯಯನ ಶಿಬಿರದ ಪ್ರಮುಖ ಆಶಯವೆಂದರೆ ಜಾತಿ, ವರ್ಗ ಮತ್ತು ಲಿಂಗ ತಾರತಮ್ಯಗಳನ್ನು ಪ್ರತ್ಯೇಕ ಸಮಸ್ಯೆಗಳಾಗಿ ನೋಡದೆ, ಅವು ಪರಸ್ಪರ ಬೆಸೆದುಕೊಂಡಿರುವ ಶೋಷಣೆಯ ವ್ಯವಸ್ಥೆಗಳೆಂಬುದನ್ನು ವಿದ್ಯಾರ್ಥಿ–ಯುವಜನರಿಗೆ ಮನವರಿಕೆ ಮಾಡಿಕೊಡುವುದಾಗಿತ್ತು. ಇಂದಿನ ಸಮಾಜದಲ್ಲಿ ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ನಿರುದ್ಯೋಗ, ಶಿಕ್ಷಣದ ಖಾಸಗೀಕರಣ, ಕಾರ್ಮಿಕರ ಶೋಷಣೆ, ರೈತರ ಸಮಸ್ಯೆಗಳು, ಕೋಮುವಾದ ಹಾಗೂ ಫ್ಯಾಸಿಸ್ಟ್ ರಾಜಕಾರಣದಂತಹ ಸವಾಲುಗಳು ಗಂಭೀರವಾಗಿ ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ–ಯುವಜನರು ವೈಜ್ಞಾನಿಕ ಸಮಾಜವಾದಿ ದೃಷ್ಟಿಕೋನದೊಂದಿಗೆ ಸಂಘಟಿತರಾಗಿ ಶೋಷಿತ ಮತ್ತು ದುಡಿಯುವ ಜನರ ಹೋರಾಟಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂಬ ವಿಚಾರಕ್ಕೆ ಶಿಬಿರದಲ್ಲಿ ವಿಶೇಷ ಒತ್ತು ನೀಡಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆಯ ಆಶಯಗಳು, ಭಗತ್ ಸಿಂಗ್ ಅವರ ಕ್ರಾಂತಿಕಾರಿ ವಿಚಾರಧಾರೆ, ಭಾರತೀಯ ಸಂವಿಧಾನದ ಸಮಾನತೆಯ ಮೌಲ್ಯಗಳು ಹಾಗೂ ಕಾರ್ಮಿಕ ಮತ್ತು ಶೋಷಿತ ಜನರ ವಿಮೋಚನೆಯ ಹೋರಾಟಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವನ್ನು ಒತ್ತಿಹೇಳಲಾಯಿತು. ಪುಸ್ತಕಗಳ ಅಧ್ಯಯನದಿಂದ ದೊರೆಯುವ ಜ್ಞಾನವನ್ನು ಸಮಾಜದ ವಾಸ್ತವಿಕ ಬದುಕಿನೊಂದಿಗೆ ಬೆಸೆಯಬೇಕು. ಆ ಜ್ಞಾನವು ಕೇವಲ ಚರ್ಚೆ ಮತ್ತು ಭಾಷಣಗಳಿಗೆ ಸೀಮಿತವಾಗದೆ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಯುವ ಸಂಘಟಿತ ಹೋರಾಟದ ಭಾಗವಾಗಬೇಕು. ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು, ರೈತರು, ದಲಿತರು ಮತ್ತು ಮಹಿಳೆಯರ ಹೋರಾಟಗಳ ನಡುವೆ ಐಕ್ಯತೆ ನಿರ್ಮಾಣವಾದಾಗ ಮಾತ್ರ ಸಮಾನತೆಯ ಸಮಾಜದ ಕನಸನ್ನು ನನಸಾಗಿಸಲು ಸಾಧ್ಯ ಎಂಬ ವಿಚಾರವನ್ನು ಪ್ರತಿಪಾದಿಸಲಾಯಿತು.

ಮೂರು ದಿನಗಳ ಶಿಬಿರದಲ್ಲಿ ವೈಚಾರಿಕ ಅಧ್ಯಯನದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ವಿಶೇಷ ಆದ್ಯತೆ ನೀಡಲಾಗಿತ್ತು. ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ (RCF) ವತಿಯಿಂದ ಕ್ರಾಂತಿಕಾರಿ ಹಾಡುಗಳ ತರಬೇತಿ ಹಾಗೂ ಪ್ರಸ್ತುತಿಯನ್ನು ಆಯೋಜಿಸಲಾಗಿತ್ತು. ಪ್ರಶಾಂತ್ ದಾನಪ್ಪ, ಆದೇಶ ನಗನೂರು ಮತ್ತು ಬಸವರಾಜ್ ಬಾಗಲವಾಡ ಅವರು ಶಿಬಿರಾರ್ಥಿಗಳಿಗೆ ಕ್ರಾಂತಿಕಾರಿ ಹಾಡುಗಳು ಹಾಗೂ ಹಲಗೆಯ ತರಬೇತಿ ನೀಡಿದರು. ಹಾಡು, ಸಂಗೀತ, ಸಾಹಿತ್ಯ ಮತ್ತು ಕಲೆಗಳು ಜನರ ನೋವು, ಹೋರಾಟ, ಶೋಷಣೆ ಹಾಗೂ ಸಾಮಾಜಿಕ ವಾಸ್ತವಗಳನ್ನು ಅಭಿವ್ಯಕ್ತಿಸುವ ಪರಿಣಾಮಕಾರಿ ಮಾಧ್ಯಮಗಳಾಗಿವೆ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಬದಲಾವಣೆಯ ಹೋರಾಟಕ್ಕೆ ಹೊಸ ಶಕ್ತಿ ತುಂಬಬಹುದು ಎಂಬುದನ್ನು ವಿವರಿಸಲಾಯಿತು. ಎರಡನೇ ದಿನದ ಸಂಜೆ ಕಾಮ್ರೇಡ್ ಎಂ. ಗಂಗಾಧರ್, ಪ್ರಶಾಂತ್ ದಾನಪ್ಪ, ಆದೇಶ ನಗನೂರು, ಹನುಮಂತಪ್ಪ ಮನ್ನಾಪುರಿ ಹಾಗೂ ಬಸವರಾಜ್ ಬಾಗಲವಾಡ ಅವರ ನೇತೃತ್ವದಲ್ಲಿ ಹಾಡು, ಹಲಗೆ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ಶಿಬಿರಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸಾಂಸ್ಕೃತಿಕ ಹೋರಾಟದ ಮಹತ್ವವನ್ನು ಅರಿತುಕೊಂಡರು.

ನವೆಂಬರ್ 9ರಂದು ನಡೆದ ಸಮಾರೋಪ ಕಾರ್ಯಕ್ರಮದೊಂದಿಗೆ ಮೂರು ದಿನಗಳ ಅಧ್ಯಯನ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಮೂರು ದಿನಗಳ ಕಾಲ ನಡೆದ ವೈಚಾರಿಕ ಅಧ್ಯಯನ, ಉಪನ್ಯಾಸ, ಸಂವಾದ, ಚರ್ಚೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪಡೆದ ಅರಿವನ್ನು ತಮ್ಮ ವೈಯಕ್ತಿಕ ಬದುಕಿಗೆ ಮಾತ್ರ ಸೀಮಿತಗೊಳಿಸದೆ ಸಮಾಜದ ನಡುವೆ ಕೊಂಡೊಯ್ದು ಜನಜಾಗೃತಿ ಮೂಡಿಸುವ ಸಂಕಲ್ಪವನ್ನು ಶಿಬಿರಾರ್ಥಿಗಳು ವ್ಯಕ್ತಪಡಿಸಿದರು. ವಿದ್ಯಾರ್ಥಿ–ಯುವಜನರು ಜಾತಿ, ಧರ್ಮ, ಭಾಷೆ ಮತ್ತು ಲಿಂಗದ ಹೆಸರಿನಲ್ಲಿ ಪರಸ್ಪರ ವಿಭಜನೆಯಾಗದೆ ಶೋಷಿತ ಜನರ ಐಕ್ಯತೆಯ ಶಕ್ತಿಯಾಗಿ ರೂಪುಗೊಳ್ಳಬೇಕು. ಶಿಕ್ಷಣ, ಉದ್ಯೋಗ, ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಮಾನವ ಘನತೆ ಪ್ರತಿಯೊಬ್ಬರಿಗೂ ದೊರೆಯುವಂತಹ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಅಧ್ಯಯನ ಮಾಡಬೇಕು, ಸಂಘಟಿತರಾಗಬೇಕು ಮತ್ತು ಹೋರಾಟದ ಹಾದಿಯಲ್ಲಿ ಮುನ್ನಡೆಯಬೇಕು ಎಂಬ ಸಂದೇಶದೊಂದಿಗೆ ಶಿಬಿರ ಸಮಾರೋಪಗೊಂಡಿತು.

ಮೂರು ದಿನಗಳ ಕಾಲ ನಡೆದ ಈ ಶಿಬಿರಕ್ಕೆ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ಉಚಿತ ಊಟ, ಉಪಹಾರ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಿ, ಯಾವುದೇ ತೊಂದರೆಯಾಗದಂತೆ ಸಂಪೂರ್ಣ ಸಹಕಾರ ನೀಡಿದ ತಾವರಗೇರಾ ಬುದ್ಧ ವಿಹಾರದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಶಿಬಿರದ ಯಶಸ್ಸಿಗೆ ಕೈಜೋಡಿಸಿದ ಎಲ್ಲ ಸಹೃದಯಿಗಳಿಗೆ DVP ಮತ್ತು RYFI ಸಂಘಟನೆಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು. ಬುದ್ಧ ವಿಹಾರದ ಸಿಬ್ಬಂದಿಯ ಆತಿಥ್ಯ, ಸಹಕಾರ ಮತ್ತು ಸೇವಾ ಮನೋಭಾವ ಶಿಬಿರದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಸಂಘಟಕರು ಕೃತಜ್ಞತೆ ವ್ಯಕ್ತಪಡಿಸಿದರು.

ಅಧ್ಯಯನ ನಮ್ಮ ಆಯುಧ – ಸಂಘಟನೆ ನಮ್ಮ ಶಕ್ತಿ – ಹೋರಾಟ ನಮ್ಮ ದಾರಿ! ಜೈ ಭೀಮ್! ಲಾಲ್ ಸಲಾಂ.ಮೌನೇಶ್ ಜಾಲವಾಡಗಿ – ದಲಿತ ವಿದ್ಯಾರ್ಥಿ ಪರಿಷತ್ (DVP)ಎಂ. ನಿರಂಜನ್ ಕುಮಾರ್ – ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ (RYFI)

 

Leave a Reply

Your email address will not be published. Required fields are marked *