ಸಿಂಧನೂರು, ನವೆಂಬರ್ 11: ತಾಲೂಕಿನ ಸಮೀಪದ ಕೊಂಕನಹಟ್ಟಿ ಆರೋಗ್ಯ ಮತ್ತು ಕ್ಷೇಮ ಮಂದಿರ ವ್ಯಾಪ್ತಿಯ ಸುಂದರ ನಗರ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಲಸಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ, ವಿಶ್ವ ಲಸಿಕಾ ದಿನಾಚರಣೆಯ ಅಂಗವಾಗಿ ಲಸಿಕೆಗಳ ಮಹತ್ವ, ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕುರಿತು ಪ್ರತಿಯೊಬ್ಬರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಲಸಿಕೆಗಳು ಪ್ರತಿಯೊಬ್ಬರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಜನನದಿಂದಲೇ ಸರ್ಕಾರ ನಿಗದಿಪಡಿಸಿರುವ ಲಸಿಕಾ ವೇಳಾಪಟ್ಟಿಯಂತೆ ಎಲ್ಲಾ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು. ಗರ್ಭಿಣಿಯರು ಆರೋಗ್ಯ ಇಲಾಖೆಯ ಸಲಹೆಯಂತೆ ಅಗತ್ಯ ಲಸಿಕೆಗಳನ್ನು ಪಡೆಯಬೇಕು. ಲಸಿಕೆಗಳು ಪೋಲಿಯೊ, ದಡಾರ, ಕ್ಷಯರೋಗ ಸೇರಿದಂತೆ ಹಲವು ಅಪಾಯಕಾರಿ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡುತ್ತವೆ. ಆದ್ದರಿಂದ ಯಾವುದೇ ಲಸಿಕೆಯನ್ನು ತಪ್ಪಿಸಿಕೊಳ್ಳದೆ ಸಂಪೂರ್ಣ ಲಸಿಕಾ ಕಾರ್ಯಕ್ರಮವನ್ನು ಪಾಲಿಸಬೇಕು ಎಂದು ಹೇಳಿದರು.

ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮೀದೇವಿ ಅವರು ಮಾತನಾಡಿ, ಕಳೆದ 50 ವರ್ಷಗಳಲ್ಲಿ ಲಸಿಕೆಗಳು ವಿಶ್ವದಾದ್ಯಂತ 15 ಕೋಟಿಗೂ ಹೆಚ್ಚು ಜೀವಗಳನ್ನು ಉಳಿಸಿವೆ. ಪ್ರತಿ ನಿಮಿಷಕ್ಕೆ ಸರಾಸರಿ ಆರು ಜೀವಗಳನ್ನು ರಕ್ಷಿಸುವಲ್ಲಿ ಲಸಿಕೆಗಳು ಮಹತ್ವದ ಪಾತ್ರ ವಹಿಸಿವೆ. ಅಲ್ಲದೆ, 30ಕ್ಕೂ ಹೆಚ್ಚು ಜೀವಕ್ಕೆ ಅಪಾಯಕಾರಿಯಾದ ರೋಗಗಳಿಂದ ರಕ್ಷಣೆ ಒದಗಿಸುತ್ತಿವೆ ಎಂದು ತಿಳಿಸಿದರು.

ಮಕ್ಕಳಿಗೆ ಪೂರ್ಣ ಪ್ರಮಾಣದ ಲಸಿಕೆ ಕೊಡಿಸುವ ಮೂಲಕ ಆರೋಗ್ಯವಂತ ಪೀಳಿಗೆಯನ್ನು ನಿರ್ಮಿಸಬೇಕು. ಲಸಿಕೆಗಳ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ದೂರಮಾಡಿ ವೈಜ್ಞಾನಿಕ ಅರಿವು ಬೆಳೆಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಲಸಿಕಾ ಕಾರ್ಡ್‌ ಪರಿಶೀಲಿಸಿ ನಿಗದಿತ ಸಮಯಕ್ಕೆ ಎಲ್ಲಾ ಲಸಿಕೆಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಮುಖ್ಯ ಸಂದೇಶ:

ಲಸಿಕೆ ಹಾಕಿಸಿ – ರೋಗಗಳಿಂದ ದೂರವಿರಿ – ಆರೋಗ್ಯವಂತ ಸಮಾಜ ನಿರ್ಮಿಸೋಣ.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಅನುಸೂಯ, ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ ಮತ್ತು ಖಾಜಬಿ, ಆಶಾ ಕಾರ್ಯಕರ್ತೆ ಮೇರಾಜ್ ಹಾಗೂ ಮಕ್ಕಳ ತಾಯಂದಿರು ಉಪಸ್ಥಿ


ತರಿದ್ದರು.

Leave a Reply

Your email address will not be published. Required fields are marked *