ಸಿರವಾರ, ನ.11: ಬುದ್ಧ ಪ್ರಜ್ಞಾ ಸಮೂಹ ಸಿರವಾರ ತಾಲೂಕು ವತಿಯಿಂದ ಸಿರವಾರ ಪಟ್ಟಣದ ವಿದ್ಯಾನಗರದಲ್ಲಿ ಧಮ್ಮ ದೀಪಾ ದಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಭಗವಾನ್ ಬುದ್ಧರು ಜ್ಞಾನೋದಯದ ನಂತರ ಧಮ್ಮದ ಬೆಳಕನ್ನು ಜಗತ್ತಿಗೆ ಸಾರಿದರು. ಸುಮಾರು 18 ವರ್ಷಗಳ ಬಳಿಕ ಮೊದಲ ಬಾರಿಗೆ ಕಪಿಲವಸ್ತುವಿಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿನ ಜನರು ಲಕ್ಷಾಂತರ ದೀಪಗಳನ್ನು ಬೆಳಗಿಸಿ, ಜಗತ್ತಿನ ದುಃಖಕ್ಕೆ ಪರಿಹಾರ ಕಂಡುಕೊಂಡು ಜ್ಞಾನದ ಬೆಳಕಿನ ಮಾರ್ಗವನ್ನು ಬೋಧಿಸಿದ ತಥಾಗತ ಭಗವಾನ್ ಬುದ್ಧರನ್ನು ಸ್ವಾಗತಿಸಿದರು ಎಂಬ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು.
ಅದೇ ರೀತಿ ಸಾಮ್ರಾಟ್ ಅಶೋಕರು ಬೌದ್ಧ ಧಮ್ಮದ ಪ್ರಸಾರಕ್ಕಾಗಿ ದೇಶದಾದ್ಯಂತ 84 ಸಾವಿರ ಸ್ತೂಪಗಳನ್ನು ನಿರ್ಮಿಸಿದರೆಂಬ ಪರಂಪರೆಯೂ ಬೌದ್ಧ ಇತಿಹಾಸದಲ್ಲಿ ಮಹತ್ವ ಪಡೆದಿದೆ. ಕಾರ್ತಿಕ ಮಾಸದ ಈ ಶುಭ ಸಂದರ್ಭದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಜ್ಞಾನದ ಬೆಳಕು, ಶಾಂತಿ, ಕರುಣೆ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಆಚರಣೆ ಬೌದ್ಧ ಸಮುದಾಯದಲ್ಲಿ ವಿಶೇಷ ಮಹತ್ವ ಪಡೆದಿದೆ ಎಂದು ತಿಳಿಸಿದರು.
ದೀಪಾವಳಿ ಕೇವಲ ದೀಪಗಳ ಹಬ್ಬವಲ್ಲ; ಅದು ಅಜ್ಞಾನದಿಂದ ಜ್ಞಾನದ ಕಡೆಗೆ, ಅಂಧಕಾರದಿಂದ ಬೆಳಕಿನ ಕಡೆಗೆ ಸಾಗುವ ಧಮ್ಮದ ಸಂದೇಶವನ್ನು ಸಾರುವ ಹಬ್ಬವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀ ಗುರಪ್ಪ, ಶ್ರೀ ರಮೇಶ್, ಶ್ರೀಕಾಂತ್, ಮೇಷಕ್, ಹನುಮೇಶ್, ಮಲ್ಲಯ್ಯ ಸೇರಿದಂತೆ ವಿದ್ಯಾನಗರ ಕಾಲೋನಿಯ ಧಮ್ಮ ಶಾಲೆಯ ಮಕ್ಕಳು, ಧಮ್ಮ ಉಪಾಸಕರು, ಕಾಲೋನಿಯ ಸಾರ್ವಜನಿಕರು ಹಾಗೂ ಸಿರವಾರ ತಾಲೂಕಿನ ವಿವಿಧ ವಾರ್ಡ್‌ಗಳ ಧಮ್ಮ ಉಪಾಸಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
