ಸಿರವಾರ, ನ. 06: ದೇಶದ ಭಾಷೆಗಳಲ್ಲಿ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದೆ ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಹಂಪಯ್ಯ ನಾಯಕ ಸಾಹುಕಾರ್ ಹೇಳಿದರು.
ತಾಲೂಕಿನ ಶಾಸಕರ ಸ್ವಗ್ರಾಮವಾದ ಬಲ್ಲಟಗಿಯ ಶ್ರೀ ಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡವು ಭಾರತದ ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಆಲೂರು ವೆಂಕಟರಾವ್ ಅವರು 1905ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯ ಮೂಲಕ ನಾಡಿನ ಜನರಲ್ಲಿ ಕನ್ನಡದ ಪ್ರಜ್ಞೆಯನ್ನು ಜಾಗೃತಗೊಳಿಸಿದರು. 1956ರಲ್ಲಿ ಮೈಸೂರು ರಾಜ್ಯ ರಚನೆಯಾಯಿತು. ನಂತರ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದರು ಎಂದು ಕನ್ನಡ ಭಾಷೆಯ ಇತಿಹಾಸವನ್ನು ಸ್ಮರಿಸಿದರು. ಶಾಲೆಯಿಂದ ಆರಂಭವಾದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯು ವಾಲ್ಮೀಕಿ ವೃತ್ತ ಸೇರಿದಂತೆ ಪಟ್ಟಣದ ವಿವಿಧ ವೃತ್ತಗಳ ಮೂಲಕ ಸಂಚರಿಸಿ ಮರಳಿ ಶಾಲೆಗೆ ಆಗಮಿಸಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಮಹತ್ವ ಸಾರುವ ವಿವಿಧ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪಿ. ಶಂಕರಗೌಡ, ಮಲ್ಲಿಕಾರ್ಜುನ ಪಾಟೀಲ್, ವೆಂಕನಗೌಡ, ಶಾಲೆಯ ಅಧ್ಯಕ್ಷ ಪಿ. ಚಂದ್ರಶೇಖರ, ಆರ್. ಶರಣಗೌಡ, ಶಿವಶರಣಗೌಡ, ಮುದಪ್ಪ ಸಾಹುಕಾರ, ಬಸವಗೌಡ ಕೊಡೆಕಲ್, ಪಿ. ಬಸವಗೌಡ ಸೇರಿದಂತೆ ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
