ಕಂಪ್ಲಿ:
ಕಂಪ್ಲಿ ಪಟ್ಟಣದ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿನ ಅವ್ಯವಸ್ಥೆ ಹಾಗೂ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ,
ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲದಲ್ಲಿ ಮಿಂಚಿನ ತಪಾಸಣೆ ಕೈಗೊಂಡಿದ್ದು, ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ತಂಡವು ಶುಕ್ರವಾರ ತಹಶೀಲ್ದಾರ್ ಕಚೇರಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ( ಸರ್ಕಾರಿ ಆಸ್ಪತ್ರೆ) ಹಾಗೂ ಪುರಸಭೆ ಕಚೇರಿಗಳ ಮೇಲೆ ಅನಿರೀಕ್ಷಿತ ಭೇಟಿ ನೀಡಿ ವ್ಯಾಪಕ ಪರಿಶೀಲನೆ ನಡೆಸಿತು.
ಬೆಂಗಳೂರ ಹಾಗೂ ಬಳ್ಳಾರಿಯಿಂದ ಆಗಮಿಸಿದ್ದ ಲೋಕಾಯುಕ್ತ ಡಿವೈಎಸ್ಪಿ ಅನಿಲ್ ಕುಮಾರ್ ಅವರ ನೇತೃತ್ವದ ತಂಡದಲ್ಲಿ ಅಧಿಕಾರಿಗಳಾದ ಬಸವರಾಜ್, ವಸಂತ್ ಸೇರಿದಂತೆ ಇತರ ಸಿಬ್ಬಂದಿಗಳು ವಿವಿಧ ಇಲಾಖೆಗಳ ಕಾರ್ಯವೈಖರಿ ಹಾಗೂ ಕಡತಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದರು.
ದೂರಿನ ಹಿನ್ನೆಲೆಯಲ್ಲಿ ಕ್ರಮ: ಇಲ್ಲಿನ ಪುರಸಭೆ, ತಹಶೀಲ್ದಾರ್ ಕಚೇರಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ ಹಾಗೂ ಅಲ್ಲಿನ ಅವ್ಯವಸ್ಥೆಯ ಕುರಿತು ಜಾಗೃತ ನಾಗರಿಕರು ಲೋಕಾಯುಕ್ತರಿಗೆ ಲಿಖಿತ ಪತ್ರದ ಮೂಲಕ ದೂರು ಸಲ್ಲಿಸಿದ್ದರು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಈ ವಿಶೇಷ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪರಿಶೀಲನೆ ವೇಳೆ ಕಚೇರಿಗಳಲ್ಲಿ ಕಂಡುಬಂದ ಲೋಪದೋಷಗಳ ಕುರಿತು ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದಾರೆ, ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದು, ದಾಖಲೆಗಳ ಸಮಗ್ರ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ದಿಢೀರ್ ನಡೆದ ಈ ಕಾರ್ಯಾಚರಣೆಯಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್
