ಕಂಪ್ಲಿ: ಕರ್ನಾಟಕದ ಸ್ಥಳೀಯ ಮಾರುಕಟ್ಟೆಗಳಿಗೆ ಹೊರ ರಾಜ್ಯಗಳಿಂದ ಅನಿಯಂತ್ರಿತವಾಗಿ ಮತ್ತು ಅಕ್ರಮವಾಗಿ ಭತ್ತ ಆಮದಾಗುತ್ತಿರುವುದನ್ನು ತಡೆಯಲು ವಿಫಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಎಚ್ಚರಿಸಿದೆ.
ಶುಕ್ರವಾರ ಇಲ್ಲಿನ ತಹಶೀಲ್ದಾರರಿಗೆ ಈ ಕುರಿತು ಪ್ರಮುಖ ಹಕ್ಕೊತ್ತಾಯಗಳ ಮನವಿ ಪತ್ರ ಸಲ್ಲಿಸಿದ ರೈತ ಮುಖಂಡರು, ಸ್ಥಳೀಯ ಭತ್ತ ಬೆಳೆಗಾರರ ಹಿತರಕ್ಷಣೆ ಮಾಡುವಂತೆ ಆಗ್ರಹಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಬಿ.ವಿ. ಗೌಡರು, “ರಾಜ್ಯದ ರೈತರು ಸಾಲಸೋಲ ಮಾಡಿ, ದುಬಾರಿ ಗೊಬ್ಬರ, ಕೀಟನಾಶಕ ಹಾಗೂ ಕೂಲಿ ನೀಡಿ ಕಷ್ಟಪಟ್ಟು ಭತ್ತ ಬೆಳೆದು ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಭಾರಿ ಪ್ರಮಾಣದ ಭತ್ತ ಇಲ್ಲಿಗೆ ಹರಿದುಬರುತ್ತಿದೆ. ಇದರಿಂದ ಸ್ಥಳೀಯ ಭತ್ತಕ್ಕೆ ಸೂಕ್ತ ಬೆಲೆ ಸಿಗದೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭೀತಿ ಎದುರಾಗಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ತುಂಗಭದ್ರಾ ನಷ್ಟದ ಬೆನ್ನಲ್ಲೇ ಮತ್ತೊಂದು ಆಘಾತ,
ಕಳೆದ ಬಾರಿ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಮುರಿದುಬಿದ್ದ ಹಿನ್ನೆಲೆಯಲ್ಲಿ, ಹೊಸ ಗೇಟ್ ಅಳವಡಿಸಲು ನೀರನ್ನು ನದಿಗೆ ಹರಿಸಲಾಗಿತ್ತು. ಇದರಿಂದ ಕಂಪ್ಲಿ, ಸಿರುಗುಪ್ಪ ಹಾಗೂ ಕುರುಗೋಡು ಭಾಗದ ರೈತರು ತಮ್ಮ ಬೆಳೆಯನ್ನು ಸಂಪೂರ್ಣ ಕಳೆದುಕೊಂಡು ಈಗಾಗಲೇ ಬೀದಿಗೆ ಬಿದ್ದಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಹೊರ ರಾಜ್ಯದ ಭತ್ತದ ಆಮದು ಸ್ಥಳೀಯ ರೈತರನ್ನು ಮತ್ತಷ್ಟು ಆರ್ಥಿಕ ಸುಳಿಗೆ ಸಿಲುಕಿಸುತ್ತಿದೆ ಎಂದು ಮುಖಂಡರು ಆಕ್ರೋಶ ಹೊರಹಾಕಿದರು.
ರೈತ ಸಂಘಟನೆಯ ಪ್ರಮುಖ ಬೇಡಿಕೆಗಳು:
• ಹೊರ ರಾಜ್ಯಗಳಿಂದ ಬರುತ್ತಿರುವ ಭತ್ತದ ಸಾಗಣೆ ಮತ್ತು ಮಾರುಕಟ್ಟೆ ಮಾರಾಟದ ಮೂಲಗಳ ಬಗ್ಗೆ ಕಟ್ಟುನಿಟ್ಟಿನ ತನಿಖೆಯಾಗಬೇಕು.
• ಕಂಪ್ಲಿ ಮತ್ತು ಬಳ್ಳಾರಿ ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಸ್ಥಳೀಯ ರೈತರು ಬೆಳೆದ ಭತ್ತಕ್ಕೆ ಮೊದಲ ಆದ್ಯತೆ ನೀಡಬೇಕು.
• ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ (MSP) ರೈತರಿಗೆ ಸಿಗುವಂತಾಗಬೇಕು ಹಾಗೂ ಅಕ್ರಮ ಸಾಗಣೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
• ಕೃಷಿ, ಆಹಾರ ಮತ್ತು ಮಾರುಕಟ್ಟೆ ಇಲಾಖೆ ಅಧಿಕಾರಿಗಳ ಸಭೆ ಕರೆದು, ಸಂತ್ರಸ್ತ ರೈತರಿಗೆ ತಕ್ಷಣವೇ ವಿಶೇಷ ಪರಿಹಾರ ಘೋಷಿಸಬೇಕು.
ಮನವಿ ಸ್ವೀಕರಿಸಿದ ತಹಶೀಲ್ದಾರರು, ಈ ಕುರಿತು ಕೃಷಿ ಮತ್ತು ಮಾರುಕಟ್ಟೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧ್ಯಕ್ಷ ಶರಣಬಸಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಭರಮರೆಡ್ಡಿ ಜೆ., ತಾಲ್ಲೂಕು ಅಧ್ಯಕ್ಷರಾದ ವಿ. ವೀರೇಶ (ಕಂಪ್ಲಿ), ಮಂಜುನಾಥ (ಕುರುಗೋಡು), ಕಾರ್ಯಾಧ್ಯಕ್ಷ ಕೆ. ರಮೇಶ, ಸಿರುಗುಪ್ಪದ ರೈತ ಮುಖಂಡ ರಾಘವೇಂದ್ರ ರೆಡ್ಡಿ ಹಾಗೂ ನಗರ ಘಟನಾಧ್ಯಕ್ಷ ತಿಮ್ಮಪ್ಪ ನಾಯಕ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
