ಮಾನ್ವಿ: ಶಿಕ್ಷಣವೆಂದರೆ ಕೇವಲ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದಲ್ಲ. ಜ್ಞಾನ ಶಿಸ್ತು ಸಮಯಪ್ರಜ್ಞೆ ಆತ್ಮವಿಶ್ವಾಸ ನಿರಂತರ ಪರಿಶ್ರಮ ಹಾಗೂ ಉತ್ತಮ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಶಿಕ್ಷಣದ ಉದ್ದೇಶವಾಗಿದೆ ಎಂದು ಶ್ರೀ ವೆಂಕಟೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಆಂಜನೇಯ ನಸಲಾಪುರ ಹೇಳಿದರು.
ಅವರು ಪಟ್ಟಣದ ಲೊಯೋಲ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹಾಗೂ ಸರ್ವತೋಮುಖ ವ್ಯಕ್ತಿತ್ವ ವಿಕಸನದ ಉದ್ದೇಶದಿಂದ ಹಮ್ಮಿಕೊಂಡಿದ್ದ ಒಂದು ದಿನದ ಜೀವನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಹತ್ವದ ಹಂತವಾಗಿದ್ದು ಪರೀಕ್ಷೆಯನ್ನು ಭಯದಿಂದಲ್ಲ ಆತ್ಮವಿಶ್ವಾಸದಿಂದ ಎದುರಿಸಬೇಕು. ಯೋಜಿತ ಅಧ್ಯಯನ ನಿಯಮಿತ ಪುನರಾವರ್ತನೆ ಏಕಾಗ್ರತೆ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಸಿದ್ಧತೆ ನಡೆಸಿದರೆ ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯ. ಮುಂದಿನ ಶಿಕ್ಷಣ ಮತ್ತು ವೃತ್ತಿಯನ್ನು ಆಯ್ಕೆ ಮಾಡುವಾಗ ತಮ್ಮ ಆಸಕ್ತಿ ಸಾಮರ್ಥ್ಯ ಹಾಗೂ ಗುರಿಗೆ ಅನುಗುಣವಾಗಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಿ ಸ್ಪಷ್ಟ ಗುರಿಯೊಂದಿಗೆ ಶಿಸ್ತು ಮತ್ತು ಪರಿಶ್ರಮವನ್ನು ಜೀವನದ ಭಾಗವಾಗಿಸಿಕೊಂಡರೆ ಯಶಸ್ಸು ಖಚಿತ ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.
ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕರಾದ ಫಾ. ಸಿರಿಲ್ ರಾಜ್ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೂಲಿಯೇಟ್ ಸಹಾಯಕ ಮುಖ್ಯೋಪಾಧ್ಯಾಯ ಡೇವಿಡ್ ಕುಮಾರ್ ರವೀಂದ್ರ ಜಾನೇಕಲ್ ಶಿಕ್ಷಕ ವೃಂದ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
