ಗಾಣದಾಳ್: ಗರ್ಭಿಣಿಯರು ಮತ್ತು ಬಾಣಂತಿಯರು ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಸೇವಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯು ತಾಯಿ ಮತ್ತು ಶಿಶು ಮರಣದ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಟಮಾರಿ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ ಕುಮಾರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಗಾಣದಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಳ್ಳಾಪುರ ಉಪಕೇಂದ್ರ ವ್ಯಾಪ್ತಿಯ ಗುಂಡರ್ವೇಲಿ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪೌಷ್ಟಿಕಾಂಶಗಳ ಅಗತ್ಯವಿದ್ದು, ಈ ಅವಧಿಯಲ್ಲಿ ಸಮತೋಲಿತ ಆಹಾರ ಸೇವಿಸುವುದರಿಂದ ತಾಯಿಯ ಆರೋಗ್ಯದ ಜೊತೆಗೆ ಗರ್ಭದಲ್ಲಿರುವ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಹಸಿರು ಸೊಪ್ಪು, ತರಕಾರಿ, ಹಣ್ಣುಗಳು, ಮೊಟ್ಟೆ, ಮೀನು, ಮೊಳಕೆ ಕಾಳುಗಳು ಸೇರಿದಂತೆ ಸ್ಥಳೀಯವಾಗಿ ದೊರೆಯುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಆಹಾರದಲ್ಲಿ ಪ್ರೋಟೀನ್, ವಿಟಮಿನ್, ಖನಿಜಾಂಶ, ಕಾರ್ಬೋಹೈಡ್ರೇಟ್ ಹಾಗೂ ಆರೋಗ್ಯಕರ ಕೊಬ್ಬಿನಾಂಶಗಳು ಸಮರ್ಪಕವಾಗಿರಬೇಕು. ಆಹಾರದ ಸ್ವಚ್ಛತೆ, ಅಡುಗೆ ಮನೆಯ ನೈರ್ಮಲ್ಯ ಹಾಗೂ ಅಯೋಡಿನ್‌ಯುಕ್ತ ಉಪ್ಪಿನ ಬಳಕೆಗೂ ಆದ್ಯತೆ ನೀಡಬೇಕು. ಗರ್ಭಿಣಿಯರು ಮತ್ತು ಬಾಣಂತಿಯರು ಆರೋಗ್ಯ ಸಿಬ್ಬಂದಿಯ ಸಲಹೆಯಂತೆ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು ಎಂದು ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಷಾರಾಣಿ ಮಾತನಾಡಿ, ಗರ್ಭಿಣಿಯರು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರ ಸೇವಿಸಿ, ಬೇಕರಿ ಪದಾರ್ಥಗಳು ಹಾಗೂ ಅತಿಯಾಗಿ ಸಂಸ್ಕರಿಸಿದ ಜಂಕ್ ಫುಡ್‌ಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ಮಗುವಿನ ಜನನದ ನಂತರವೂ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಾಣಂತಿಯರು ಕುಟುಂಬ ಯೋಜನೆಯ ಸೂಕ್ತ ವಿಧಾನಗಳನ್ನು ಅನುಸರಿಸಿ ಮಕ್ಕಳ ಜನನದ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ ಕಾಪಾಡಿಕೊಳ್ಳುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆ ಅಂಬುಜಾಕ್ಷಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ದೊರೆಯುವ ಪೌಷ್ಟಿಕ ಆಹಾರ ಮತ್ತು ವಿವಿಧ ಕಲ್ಯಾಣ ಸೇವೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗುಂಡರ್ವೇಲಿ ಗ್ರಾಮದ ಗರ್ಭಿಣಿಯರು, ಬಾಣಂತಿಯರು ಹಾಗೂ ಅಂಗನವಾಡಿ ಕೇಂದ್ರದ ಫಲಾನುಭವಿಗಳು ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆ ಪಾರ್ವತಿ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.
