*ಸಿಂಧನೂರು ನ 05* : ದಲಿತ ವಿದ್ಯಾರ್ಥಿ ಪರಿಷತ್ (DVP) ಮತ್ತು ಭಾರತ ಕ್ರಾಂತಿಕಾರಿ ಯುವಜನರ ಒಕ್ಕೂಟ (RYFI) ಸಂಯುಕ್ತ ಆಶ್ರಯದಲ್ಲಿ 2026ರ ನವೆಂಬರ್ 7ರಿಂದ 9ರವರೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಬುದ್ಧ ವಿಹಾರದಲ್ಲಿ ಮೂರು ದಿನಗಳ ವಿದ್ಯಾರ್ಥಿ-ಯುವಜನರ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿ.ವಿ
ಪಿ ರಾಯಚೂರು ಜಿಲ್ಲಾ ಸಂಚಾಲಕ ಮೌನೇಶ್ ಜಾಲವಾಡಗಿ ತಿಳಿಸಿದರು.
ದೇಶದ ರಾಜಕೀಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ನ್ಯಾಯದ ಮೇಲೆ ಸಂಘಟಿತ ದಾಳಿಗಳು ನಡೆಯುತ್ತಿವೆ. ಜಾತಿ ತಾರತಮ್ಯ, ಅಸ್ಪೃಶ್ಯತೆ, ದಲಿತರ ಮೇಲಿನ ದೌರ್ಜನ್ಯ, ಕೋಮುವಾದಿ ರಾಜಕಾರಣ, ನಿರುದ್ಯೋಗ, ಶಿಕ್ಷಣದ ಖಾಸಗೀಕರಣ ಹಾಗೂ ವಿದ್ಯಾರ್ಥಿ-ಯುವಜನರ ಹಕ್ಕುಗಳ ದಮನ ಹೆಚ್ಚಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಯುವಜನರು ಕೇವಲ ಉದ್ಯೋಗದ ಹುಡುಕಾಟಕ್ಕೆ ಸೀಮಿತವಾಗದೆ, ಸಮಾಜದ ಬದಲಾವಣೆಯ ಮುಂಚೂಣಿ ಶಕ್ತಿಗಳಾಗಿ ರೂಪುಗೊಳ್ಳಬೇಕಿದೆ. ಈ ಉದ್ದೇಶದಿಂದ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ನವೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಹಲಗೆ ಬಾರಿಸುವ ಮೂಲಕ ಹಾಗೂ ಸಸಿಗೆ ನೀರೆರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಗುವುದು. ಸಂವಿಧಾನದ ಪೀಠಿಕೆ ವಾಚನದೊಂದಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಡಿವಿಪಿ ರಾಯಚೂರು ಜಿಲ್ಲಾ ಸಂಚಾಲಕ ಮೌನೇಶ್ ಜಾಲವಾಡಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಬಿರದಲ್ಲಿ ಆರು ಪ್ರಮುಖ ವಿಷಯಗಳ ಕುರಿತು ಗಂಭೀರ ಅಧ್ಯಯನ ಮತ್ತು ಚರ್ಚೆಗಳು ನಡೆಯಲಿವೆ. ಮಾನವ ಸಮಾಜದ ಇತಿಹಾಸ, ಭಾರತದ ಆಧುನಿಕ ರಾಜಕೀಯ ಚರಿತ್ರೆ, ದಲಿತ ಚಳವಳಿಯ ಬೆಳವಣಿಗೆ, ಸಂವಿಧಾನದ ಆಶಯಗಳು, ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನೆಯ ಹಾದಿ ಹಾಗೂ ಇಂದಿನ ವಿದ್ಯಾರ್ಥಿ-ಯುವಜನರ ರಾಜಕೀಯ ಮತ್ತು ಸಾಮಾಜಿಕ ಕಾರ್ಯಭಾರಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.
ಇದರ ಜೊತೆಗೆ ಕ್ರಾಂತಿಕಾರಿ ಹಾಡುಗಳ ತರಬೇತಿ, ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ಸಂವಾದ, ಹಾಡು ಮತ್ತು ಹಲಗೆಯ ಕಲಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಪ್ರಮುಖರು ಈ ಚಟುವಟಿಕೆಗಳನ್ನು ಮುನ್ನಡೆಸಲಿದ್ದಾರೆ.
ಈ ಅಧ್ಯಯನ ಶಿಬಿರ ಕೇವಲ ಮೂರು ದಿನಗಳ ಕಾರ್ಯಕ್ರಮವಲ್ಲ. ಯುವಜನರ ಚಿಂತನೆಗೆ ಹೊಸ ದಿಕ್ಕು ನೀಡುವ ಮತ್ತು ಹೋರಾಟಕ್ಕೆ ಹೊಸ ಶಕ್ತಿ ತುಂಬುವ ವೈಚಾರಿಕ ವೇದಿಕೆಯಾಗಿದೆ. ಜಾತಿ ವ್ಯವಸ್ಥೆಯ ಸಂಕೋಲೆಗಳನ್ನು ಕಳಚಲು, ಕೋಮುವಾದಿ ಶಕ್ತಿಗಳನ್ನು ಎದುರಿಸಲು, ಶಿಕ್ಷಣ ಮತ್ತು ಉದ್ಯೋಗದ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಸಮಾಜ ನಿರ್ಮಿಸಲು ವಿದ್ಯಾರ್ಥಿ-ಯುವಜನರು ವೈಜ್ಞಾನಿಕ ಹಾಗೂ ಕ್ರಾಂತಿಕಾರಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.
ಆದ್ದರಿಂದ ಈಗಾಗಲೇ ನೋಂದಾಯಿಸಿಕೊಂಡಿರುವ ಹಾಗೂ ನೋಂದಾಯಿಸಿಕೊಳ್ಳಲಿರುವ ಎಲ್ಲ ವಿದ್ಯಾರ್ಥಿ-ಯುವಜನರು ಯಾವುದೇ ಕಾರಣಕ್ಕೂ ಗೈರುಹಾಜರಾಗದೆ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು. “ಅಧ್ಯಯನ ಮಾಡೋಣ, ಪ್ರಶ್ನಿಸೋಣ, ಸಂಘಟಿತರಾಗೋಣ, ಅನ್ಯಾಯದ ವಿರುದ್ಧ ಹೋರಾಡೋಣ, ಸಮಾನತೆಯ ಸಮಾಜ ಕಟ್ಟೋಣ” ಎಂಬ ಸಂಕಲ್ಪದೊಂದಿಗೆ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಜಂಟಿ ಸಂಘಟನೆಗಳು ಕರೆ ನೀಡಿವೆ.
ಈ ಪತ್ರಿಕಾಗೋಷ್ಠಿಯಲ್ಲಿ ಮೌನೇಶ್ ಜಾಲವಾಡಗಿ – ಜಿಲ್ಲಾ ಸಂಚಾಲಕರು, DVP ರಾಯಚೂರು; ನಿರಂಜನ್ ಎಂ. – ಸಂಘಟನಾ ಚಾಲಕರು, RYFI ರಾಯಚೂರು; ಬಸವರಾಜ್ ಬಾಗಲವಾಡ – RYFI ರಾಯಚೂರು; ಶಶಿಕುಮಾರ್ ಕೆಸರಟ್ಟಿ – DVP ಲಿಂಗಸಗೂರು; ದುರುಗೇಶ್ ಕಲ್ಮಂಗಿ – ತಾಲೂಕಾಧ್ಯಕ್ಷರು; ಮೌನೇಶ್ ತುಗ್ಗಲದಿನ್ನಿ – ಮಸ್ಕಿ ತಾಲೂಕಾಧ್ಯಕ್ಷರು; ಚನ್ನಬಸವ ಯಾಪಲಪರ್ವಿ ಹಾಗೂ ಅಪ್ಪಯ್ಯ ಸಿಂಧನೂರು ಉಪಸ್ಥಿತರಿದ್ದರು.
