ತಾಂಡವಪುರ, ನವೆಂಬರ್ 5*
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಕಾನೂನು ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಈ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.
ಇಂದು ಎಸ್ ಐ ಆರ್ ಪ್ರಕ್ರಿಯೆ ವಿರೋಧಿಸಿ ಹಾಗೂ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದೆ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಅರ್ಹ ಮತದಾರರ ಮತದಾನದ ಹಕ್ಕಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಎಸ್ಐಆರ್ ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ನವೆಂಬರ್ 1ರಂದು ದೆಹಲಿಯಲ್ಲಿ ಈ ಸಂಬಂಧ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿದ್ದು, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಹೋರಾಟವನ್ನು ಮುಂದುವರಿಸಿವೆ. ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ವಿಚಾರವಲ್ಲ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಹೋರಾಟವಾಗಿದೆ ಎಂದು ತಿಳಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇಮಕಾತಿ ಪ್ರಕ್ರಿಯೆಯ ಕುರಿತು ಪ್ರಶ್ನೆಗಳನ್ನು ಎತ್ತಿದ ಅವರು, ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಆಯ್ಕೆ ಸಮಿತಿಯ ರಚನೆಯನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದೇ ಗಂಭೀರ ವಿಚಾರವಾಗಿದೆ. ಹಿಂದೆ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡಿದ್ದ ಆಯ್ಕೆ ಸಮಿತಿಯ ವ್ಯವಸ್ಥೆಯನ್ನು ಬದಲಾಯಿಸಿ, ಮುಖ್ಯ ನ್ಯಾಯಮೂರ್ತಿಯ ಬದಲಿಗೆ ಕೇಂದ್ರ ಸಚಿವರೊಬ್ಬರನ್ನು ಸಮಿತಿಯ ಸದಸ್ಯರನ್ನಾಗಿ ಮಾಡುವ ಕಾನೂನನ್ನು ಜಾರಿಗೆ ತರಲಾಯಿತು. ಆ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಪ್ರಾಬಲ್ಯ ಹೆಚ್ಚುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.
ಜ್ಞಾನೇಶ್ ಕುಮಾರ್ ಅವರ ನೇಮಕಾತಿಯ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರೂ ನೇಮಕಾತಿಯನ್ನು ಮುಂದುವರಿಸಲಾಯಿತು. ಚುನಾವಣಾ ಆಯೋಗದಂತಹ ಮಹತ್ವದ ಸಾಂವಿಧಾನಿಕ ಸಂಸ್ಥೆಯ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಅದರ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡುವಂತಿರಬೇಕು. ಆದರೆ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ತನ್ನ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 240 ಸ್ಥಾನಗಳನ್ನು ಗೆದ್ದಿದ್ದು, ಸ್ವಂತ ಬಲದಿಂದ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆ ತರುವ ಮೂಲಕ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.
ಯಾವುದೇ ಅರ್ಹ ಮತದಾರರ ಹೆಸರನ್ನು ಸೂಕ್ತ ಕಾರಣವಿಲ್ಲದೆ ಅಥವಾ ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೆ ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಅವರ ಮತದಾನದ ಹಕ್ಕಿಗೆ ಧಕ್ಕೆ ತರುವಂತಾಗಿದೆ. ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನ ಮಾಡುವ ಅವಕಾಶ ದೊರೆಯಬೇಕು. ಆದರೆ ಎಸ್ಐಆರ್ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾದರೂ, ಆ ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಗೂ ಮುನ್ನ ಸುಮಾರು 5.54 ಕೋಟಿ ಮತದಾರರಿದ್ದು, ಪರಿಷ್ಕರಣೆಯ ನಂತರ ಈ ಸಂಖ್ಯೆ ಸುಮಾರು 4.55 ಕೋಟಿಗೆ ಇಳಿಕೆಯಾಗಿದೆ. ಅಂದರೆ ಸುಮಾರು 99 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳು ಕಡಿಮೆಯಾಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಇಳಿಕೆಯಾಗಿರುವುದು ಗಂಭೀರವಾಗಿ ಪರಿಶೀಲಿಸಬೇಕಾದ ವಿಚಾರವಾಗಿದೆ. ಮತದಾರರ ಹೆಸರುಗಳನ್ನು ತೆಗೆದುಹಾಕಿರುವುದಕ್ಕೆ ಸಮರ್ಪಕ ಕಾರಣಗಳನ್ನು ಬಹಿರಂಗಪಡಿಸಬೇಕು. ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷ ಮತಗಳನ್ನು ಅಕ್ರಮವಾಗಿ ಸೇರ್ಪಡೆಗೊಳಿಸಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಿದ್ದರು. ರಾಜಾಜಿನಗರದಲ್ಲಿಯೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಮತದಾರರ ಪಟ್ಟಿಯಲ್ಲಿನ ಇಂತಹ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆರಂಭವಾದ ಹೋರಾಟ ಇಂದು ದೇಶವ್ಯಾಪಿ ವಿಸ್ತರಿಸಿದೆ ಎಂದು ತಿಳಿಸಿದರು.
ಚುನಾವಣಾ ಆಯೋಗದ ಆಂತರಿಕ ಕಾರ್ಯವೈಖರಿಯ ಕುರಿತು ಇಂಗ್ಲೀಷ್ ಪತ್ರಿಕೆಯೊಂದು ಪ್ರಕಟಿಸಿರುವ ತನಿಖಾ ವರದಿಯನ್ನು ಉಲ್ಲೇಖಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದ ಚುನಾವಣಾ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ವಿವಿಧ ನಿರ್ಧಾರಗಳ ಕುರಿತು ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿರುವುದು ವರದಿಯಾಗಿದೆ ಎಂದು ಹೇಳಿದರು.
ಹೊಸ ಮತದಾರರ ನೋಂದಣಿ, ಮತದಾರರ ಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವಿಕೆ, ಮತದಾರರ ದತ್ತಾಂಶ ನಿರ್ವಹಣೆ ಹಾಗೂ ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ತರದೆ ಕೈಗೊಂಡಿರುವುದರ ಕುರಿತು ಇಬ್ಬರು ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚುನಾವಣಾ ಆಯೋಗದಂತಹ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯೊಳಗೇ ಈ ರೀತಿಯ ಆಕ್ಷೇಪಣೆಗಳು ವ್ಯಕ್ತವಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಆಯೋಗದ ನಿರ್ಧಾರಗಳು ಪಾರದರ್ಶಕವಾಗಿ ಮತ್ತು ನಿಯಮಾನುಸಾರ ನಡೆಯುತ್ತಿವೆಯೇ ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರೆಯಬೇಕಾಗಿದೆ ಎಂದು ಸಿದ್ದರಾಮಯ್ಯನವರು ಅಭಿಪ್ರಾಯಪಟ್ಟರು.
2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ಮಾದರಿಯ ಹೆಸರಿನಲ್ಲಿ ವ್ಯಾಪಕ ಪ್ರಚಾರ ನಡೆಸಿದ ಬಿಜೆಪಿ, 2019ರಲ್ಲಿ ಪುಲ್ವಾಮಾ ಮತ್ತು ಬಾಲಾಕೋಟ್ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತು. 2024ರಲ್ಲಿ ಸ್ವಂತ ಬಹುಮತ ಪಡೆಯಲು ವಿಫಲವಾದ ನಂತರ ಚುನಾವಣಾ ಪ್ರಕ್ರಿಯೆಯನ್ನೇ ತನ್ನ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಕೋಮುವಾದ ಮತ್ತು ಚುನಾವಣಾ ಅಕ್ರಮಗಳ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.
ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಜನರ ಮತದಾನದ ಹಕ್ಕುಗಳಿಗೆ ಧಕ್ಕೆಯಾದರೆ ಪ್ರಜಾಪ್ರಭುತ್ವದ ಮೂಲ ಆಶಯಗಳೇ ದುರ್ಬಲಗೊಳ್ಳುತ್ತವೆ. ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಎಸ್ಐಆರ್ ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಪಕ್ಷಗಳು ನಡೆಸುತ್ತಿರುವ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೂ ಈ ಹೋರಾಟವನ್ನು ವಿಸ್ತರಿಸಲಾಗುವುದು. ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗಾಗಿ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟವು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ವರ್ಚಸ್ಸು ಕಡಿಮೆಯಾಗುತ್ತಿದ್ದು, 2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಸಂವಿಧಾನದ ಆಶಯಗಳು ಅನುಷ್ಠಾನಗೊಳ್ಳಬೇಕು. ಚುನಾವಣಾ ಆಯೋಗದ ಸ್ವಾಯತ್ತತೆ, ಮತದಾರರ ಹಕ್ಕುಗಳು ಹಾಗೂ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಎಲ್ಲರೂ ಜಾಗೃತರಾಗಿ ಹೋರಾಟವನ್ನು ಮುಂದುವರಿಸಬೇಕು ಎಂದು ಸಿದ್ದರಾಮಯ್ಯ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಮಾತನಾಡಿ ಪ್ರಜಾಪ್ರಭುತ್ವದ ರಕ್ಷಣೆ, ಮತದಾನದ ಹಕ್ಕಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ
‘ಇಂಡಿಯಾ’ ಒಕ್ಕೂಟದ ಪಕ್ಷಗಳು ಕರೆ ನೀಡಿದ್ದ “ಮತ ಉಳಿಸಿ-ದೇಶ ಉಳಿಸಿ” (ವೋಟ್ ಬಚಾವೋ-ದೇಶ್ ಬಚಾವೋ) ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಸಂವಿಧಾನದ ಆಶಯಗಳು ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ಪರವಾಗಿ ಬಲವಾದ ಧ್ವನಿ ಎತ್ತಬೇಕು ಎಂದು ಹೇಳಿದ ಡಿಕೆ ಶಿವಕುಮಾರ್ ರವರು
ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಪ್ರತಿಯೊಂದು ಮತವೂ ಜನರ ಅಧಿಕಾರದ ಪ್ರತೀಕ. ಮತದಾನದ ಹಕ್ಕಿನ ಪಾವಿತ್ರ್ಯವನ್ನು ಕಾಪಾಡುವುದು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಜವಾಬ್ದಾರಿ. ಈ ಹಕ್ಕುಗಳ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರ. ವಾಗಿ ಇರುತ್ತದೆ ಎಂದರು
ಪ್ರತಿಭಟನೆಯಲ್ಲಿ , ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್, ಎಐಸಿಸಿ ವೀಕ್ಷಕರಾದ ಪಲ್ಲಂ ರಾಜು, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ರೈತ ಸಂಘದ ರಂಗಯ್ಯ, ಪ್ರಕಾಶ್ ಕೆ., ಸಿಪಿಐನ ಶ್ರೀ ಸಾತಿ ಸುಂದರೇಶ್, ಸಿಪಿಐ (ಎಂಎಲ್) ಲಿಬರೇಷನ್ನ ಕ್ಲಿಫ್ಟನ್ ರೊಸಾರಿಯೊ, ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ಸಿಪಿಐ(ಎಂ) ಸಂಘಟನೆಯ ಕೆ. ನೀಲಾ ಶಾಸಕರು ಸಚಿವರು ಮಾಜಿ ಶಾಸಕರುಗಳು ಮುಖಂಡರುಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಈ ಪ್ರತಿಭಟನೆಯಲ್ಲಿ ಧರಣಿಯಲ್ಲಿ ಭಾಗಿಯಾಗಿದ್ದರು
