ಕಂಪ್ಲಿ: ಬೆಳೆದು ನಿಂತಿರುವ ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಡಿಸೆಂಬರ್ 15ರವರೆಗೆ ಸಮರ್ಪಕವಾಗಿ ನೀರು ಹರಿಸಬೇಕೆಂದು ಆಗ್ರಹಿಸಿ ನವೆಂಬರ್ 14ರಂದು ಕಂಪ್ಲಿಯಿಂದ ಮುನಿರಾಬಾದ್‌ನ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಕಚೇರಿಯವರೆಗೆ ರೈತರ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ತಿಳಿಸಿದ್ದಾರೆ.
ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ನಡೆದ ರೈತರ ನೀರಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ರೈತರು ಸಾಲಸೋಲ ಮಾಡಿ ಬೆಳೆ ಬೆಳೆದಿದ್ದಾರೆ. ಬೆಳೆ ಕೈಸೇರಲು ಇನ್ನು ಒಂದು ತಿಂಗಳ ಕಾಲ ನೀರಿನ ಅವಶ್ಯಕತೆಯಿದೆ. ಆದರೆ ಸರ್ಕಾರ ಮತ್ತು ಅಧಿಕಾರಿಗಳ ನಾಟಕೀಯ ಧೋರಣೆಯಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಹೋರಾಟದ ವಿವರ:* ನವೆಂಬರ್ 14ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಕಂಪ್ಲಿಯಿಂದ ಪಾದಯಾತ್ರೆ ಆರಂಭವಾಗಲಿದ್ದು, ನ.15ರ ಭಾನುವಾರ ಸಂಜೆ ಮುನಿರಾಬಾದ್ ತಲುಪಲಿದೆ. ನವೆಂಬರ್ 16ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ನೀರಾವರಿ ಸಲಹಾ ಸಮಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು.
ಬೆಳೆಗಳಿಗೆ ನೀರು ಒದಗಿಸುವ ಭರವಸೆ ಸಿಗುವ ತನಕ ಹೋರಾಟ ಮುಂದುವರಿಯಲಿದ್ದು, ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಅವರು ಕರೆ ನೀಡಿದರು. ಸಭೆಯಲ್ಲಿ ರೈತ ಮುಖಂಡರಾದ ಶರಣಬಸವ, ಭರಮರೆಡ್ಡಿ ಜಿ, ವಿ.ವೀರೇಶ್, ಕೆ.ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *