ಸಿರವಾರ, ನ. 05: ಸರ್ಕಾರಿ ಶಾಲೆಗಳ ಬಗ್ಗೆ ಕೆಲವರಲ್ಲಿ ನಿರ್ಲಕ್ಷ್ಯ ಭಾವನೆ ಇರುತ್ತದೆ. ಆದರೆ ಇಂಡಿ ವಿಲೇಜ್ ಫೌಂಡೇಶನ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಗಾಗಿ 7 ಲ್ಯಾಪ್ಟಾಪ್ಗಳನ್ನು ವಿತರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾರ್ಥಿನಿಯರು ಇವುಗಳನ್ನು ಸದುಪಯೋಗಪಡಿಸಿಕೊಂಡು ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಹಶೀಲ್ದಾರ್ ಅಶೋಕ ಪವಾರ್ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಇಂಡಿ ವಿಲೇಜ್ ಫೌಂಡೇಶನ್ ವತಿಯಿಂದ ವಿತರಿಸಲಾದ 7 ಲ್ಯಾಪ್ಟಾಪ್ಗಳೊಂದಿಗೆ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಅಕ್ಷರ ಕಲಿಯದವರನ್ನು ಅನಕ್ಷರಸ್ಥರು ಎಂದು ಕರೆಯಲಾಗುತ್ತಿತ್ತು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವೂ ಅತ್ಯಗತ್ಯವಾಗಿದೆ. ಫೌಂಡೇಶನ್ ನೀಡಿರುವ ಲ್ಯಾಪ್ಟಾಪ್ಗಳ ಮೂಲಕ ವಿದ್ಯಾರ್ಥಿನಿಯರು ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಳ್ಳಬೇಕು. ಈ ಜ್ಞಾನ ಮುಂದಿನ ದಿನಗಳಲ್ಲಿ ಅವರ ಶೈಕ್ಷಣಿಕ ಹಾಗೂ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ. ಲ್ಯಾಪ್ಟಾಪ್ಗಳನ್ನು ಜವಾಬ್ದಾರಿಯಿಂದ ಬಳಸಿ, ಹಲವು ವರ್ಷಗಳ ಕಾಲ ಬಾಳಿಕೆ ಬರುವಂತೆ ಉತ್ತಮವಾಗಿ ನಿರ್ವಹಿಸಬೇಕು. ಸರ್ಕಾರಿ ಶಾಲೆಯನ್ನು ಗುರುತಿಸಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಲ್ಯಾಪ್ಟಾಪ್ಗಳನ್ನು ನೀಡಿರುವ ಫೌಂಡೇಶನ್ಗೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಫಕ್ರುದ್ದೀನ್, ಇಂಡಿ ವಿಲೇಜ್ ಫೌಂಡೇಶನ್ ಎನ್ಜಿಒ ಸಂಯೋಜಕರಾದ ಸುಪ್ರಿಯಾ, ಅನುಷಾ, ಅಮರೇಶ್, ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಮುಖ್ಯಗುರು ರಾಜಾಸಾಬ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಬಸವರಾಜ್, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನವೀರಯ್ಯ, ಶಿಕ್ಷಕಿಯರಾದ ಶಕುಂತಲಾ, ನಾಗರತ್ನ, ಲಲಿತಾ, ಶೃತಿ, ಭುವನೇಶ್ವರಿ, ಯಲ್ಲಮ್ಮ, ರಮಾದೇವಿ, ವಿಜಯಲಕ್ಷ್ಮಿ ಹಾಗೂ ಮೌಲಾಸಾಬ್ ಉಪಸ್ಥಿತರಿದ್ದರು.
