ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ತಾರನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಯಚೂರಿನ ಎಲ್.ವಿ.ಡಿ. ಕಾಲೇಜಿನ ಆವರಣದಲ್ಲಿ ನಡೆದ 2026ನೇ ಸಾಲಿನ 4ನೇ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿ.ಆರ್.ಇ.ಟಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪುರುಷ ಹಾಗೂ ಮಹಿಳಾ ವಿಭಾಗದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಿಸ್ತು ಹಾಗೂ ಕ್ರೀಡಾ ಪ್ರತಿಭೆಯ ಮೂಲಕ ಹಲವು ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಶೇಷವಾಗಿ ಓಟ, ರಿಲೇ, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಬಲ್ಲೆ ಎಸೆತ ಹಾಗೂ ಸುತ್ತಿಗೆ ಎಸೆತ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಉತ್ತಮ ಸಾಧನೆ ಮೆರೆದಿದ್ದಾರೆ.
*ಪುರುಷರ ವಿಭಾಗದಲ್ಲಿ ಸಾಧನೆ:*4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಈರೇಶ, ಮಣಿಕಂಠ, ಶಿವಲಿಂಗ ಹಾಗೂ ಗೋಪಾಲ ಅವರ ತಂಡ ಪ್ರಥಮ ಸ್ಥಾನ ಗಳಿಸಿದೆ. 1500 ಮೀಟರ್ ಓಟದಲ್ಲಿ ಭೀಮಶಂಕರ್ ಪ್ರಥಮ ಸ್ಥಾನ, 100 ಮೀಟರ್ ಓಟದಲ್ಲಿ ಈರೇಶ ತೃತೀಯ ಸ್ಥಾನ, 200 ಮೀಟರ್ ಓಟದಲ್ಲಿ ಪ್ರಜ್ವಲ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. 110 ಮೀಟರ್ ಹರ್ಡಲ್ಸ್ ಹಾಗೂ 400 ಮೀಟರ್ ಹರ್ಡಲ್ಸ್ ಸ್ಪರ್ಧೆಗಳಲ್ಲಿ ನವೀನ್ ಕುಮಾರ್ ತೃತೀಯ ಸ್ಥಾನ ಗಳಿಸಿದ್ದು, 400 ಮೀಟರ್ ಹರ್ಡಲ್ಸ್ನಲ್ಲಿ ರಾಜೇಶ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಚಕ್ರ ಎಸೆತದಲ್ಲಿ ನಾಗರಾಜ ತೃತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಶಶಿಕುಮಾರ್ ಪ್ರಥಮ ಹಾಗೂ ರಾಹುಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಲ್ಲೆ ಎಸೆತದಲ್ಲಿ ನಿತಿನ್ ಕುಮಾರ್ ಪ್ರಥಮ ಸ್ಥಾನ, ಸುತ್ತಿಗೆ ಎಸೆತದಲ್ಲಿ ಸಂತೋಷ್ ತೃತೀಯ ಸ್ಥಾನ ಗಳಿಸಿದ್ದಾರೆ. ಟ್ರಿಪಲ್ ಜಂಪ್ನಲ್ಲಿ ಉಮೇಶ್ ಪ್ರಥಮ ಹಾಗೂ ಮಣಿಕಂಠ ದ್ವಿತೀಯ ಸ್ಥಾನ ಪಡೆದು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮೆರೆದಿದ್ದಾರೆ.
*ಮಹಿಳೆಯರ ವಿಭಾಗದಲ್ಲಿ ಸಾಧನೆ:*
ಮಹಿಳಾ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. 100 ಮೀಟರ್ ಓಟದಲ್ಲಿ ಜ್ಞಾನಮ್ಮ ಪ್ರಥಮ ಸ್ಥಾನ, 200 ಮೀಟರ್ ಓಟದಲ್ಲಿ ಜ್ಞಾನಮ್ಮ ತೃತೀಯ ಹಾಗೂ ಬಿಂದುಶ್ರೀ ನಾಲ್ಕನೇ ಸ್ಥಾನ ಪಡೆದಿದ್ದಾರೆ. 1500 ಮೀಟರ್ ಓಟದಲ್ಲಿ ಭವಾನಿ ತೃತೀಯ ಸ್ಥಾನ ಹಾಗೂ 10,000 ಮೀಟರ್ ಓಟದಲ್ಲಿ ಕಮಲಾಕ್ಷಿ ತೃತೀಯ ಸ್ಥಾನ ಗಳಿಸಿದ್ದಾರೆ. 110 ಮೀಟರ್ ಹರ್ಡಲ್ಸ್ನಲ್ಲಿ ಬಿಂದುಶ್ರೀ ಪ್ರಥಮ ಹಾಗೂ ಶಾಮಲ ದ್ವಿತೀಯ ಸ್ಥಾನ ಪಡೆದಿದ್ದಾರೆ. 4×100 ಮೀಟರ್ ರಿಲೇಯಲ್ಲಿ ಬಿಂದುಶ್ರೀ, ಅಕ್ಷತಾ, ಸುಚಿತ್ರ ಹಾಗೂ ಜ್ಞಾನಮ್ಮ ಅವರ ತಂಡ ಪ್ರಥಮ ಸ್ಥಾನ ಗಳಿಸಿದೆ. 4×400 ಮೀಟರ್ ರಿಲೇಯಲ್ಲಿ ಭವಾನಿ, ಜ್ಞಾನಮ್ಮ, ಅಕ್ಷತಾ ಹಾಗೂ ಕಮಲಾಕ್ಷಿ ಅವರ ತಂಡ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದೆ. ಗುಂಡು ಎಸೆತದಲ್ಲಿ ಸಲಾಮ್ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ಅಕ್ಷತಾ ಪ್ರಥಮ ಹಾಗೂ ಬಿಂದುಶ್ರೀ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚಕ್ರ ಎಸೆತದಲ್ಲಿ ಶಾಮಲ ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ಅಕ್ಷತಾ ಪ್ರಥಮ ಹಾಗೂ ಕಮಲಾಕ್ಷಿ ತೃತೀಯ ಸ್ಥಾನ ಗಳಿಸಿದ್ದಾರೆ. ಇನ್ನು ಸುತ್ತಿಗೆ ಎಸೆತ ಹಾಗೂ ಬಲ್ಲೆ ಎಸೆತ ಸ್ಪರ್ಧೆಗಳಲ್ಲಿ ಶಾಮಲ ದ್ವಿತೀಯ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಕ್ರೀಡಾಪಟುಗಳ ಈ ಸಾಧನೆಗೆ ವಿ.ಆರ್.ಇ.ಟಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಪಾಸೋಡಿ ಹಾಗೂ ಕಾರ್ಯದರ್ಶಿಗಳಾದ ಡಾ. ರಾಜಶೇಖರ್ ಪಾಸೋಡಿ ಅವರು ಹರ್ಷ ವ್ಯಕ್ತಪಡಿಸಿ, ಸಾಧನೆ ಮಾಡಿದ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಿದ ಹನುಮಂತರೆಡ್ಡಿ ಹಾಗೂ ಪ್ರೋತ್ಸಾಹ ನೀಡಿದ ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರು ಮತ್ತು ತರಬೇತುದಾರರ ಕಾರ್ಯವನ್ನು ಸಂಸ್ಥೆಯ ಆಡಳಿತ ಮಂಡಳಿ ಶ್ಲಾಘಿಸಿದೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸಾಧಿಸುವ ಛಲವನ್ನು ಬೆಳೆಸುತ್ತದೆ. ಇಂತಹ ಸಾಧನೆಗಳು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಹಾವಿದ್ಯಾಲಯದ ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಇನ್ನಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಂಸ್ಥೆ ಹಾಗೂ ಜಿಲ್ಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ವಿ.ಆರ್.ಇ.ಟಿ. ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ಕ್ರೀಡಾಭಿಮಾನಿಗಳು ಸಾಧಕ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
