ತಾಳಿಕೋಟೆ: ಏಡ್ಸ್ ಎಂಬುದು ಒಂದು ಮಾರಣಾಂತಿಕ ಕಾಯಿಲೆಯಾಗಿದ್ದರೂ ಸುರಕ್ಷಿತ ಲೈಂಗಿಕ ಕ್ರಮಗಳನ್ನು ಅನುಸರಿಸುವುದರಿಂದ ಅದನ್ನು ನಿಯಂತ್ರಿಸಬಹುದು. ಈ ರೋಗದ ಕುರಿತು ಭಯಬೇಡ ಆದರೆ ಮುನ್ನೆಚ್ಚರಿಕೆ ಅಗತ್ಯವಾಗಿದೆ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಹೇಳಿದರು. ಸೋಮವಾರ ಪಟ್ಟಣದಲ್ಲಿ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟು ಘಟಕ ವಿಜಯಪುರ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಮುದ್ದೆಬಿಹಾಳ, ಎಸ್.ವಿ.ಎಂ. ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತಾಳೆಕೋಟಿ ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನದ ಆಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು 1988ರಿಂದ ಆರಂಭಿಸಿತು ಇದರ ಪ್ರಮುಖ ಉದ್ದೇಶ ಎಚ್.ಐ.ವಿ./ ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಅದರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರು ಮಾಡುವುದು ಹಾಗೂ ರೋಗಿಗಳಿಗೆ ಸಮಾಜದಲ್ಲಿ ಗೌರವ ದೊರಕಿಸುವಂತೆ ಮಾಡುವುದಾಗಿದೆ ಎಂದ ಅವರು ಇವತ್ತು ಇಂತಹ ನಿರಂತರ ಜಾಗೃತಿ ಕಾರ್ಯಕ್ರಮಗಳಿಂದ ಯುವಜನರಲ್ಲಿ ಆರೋಗ್ಯ ಪ್ರಜ್ಞೆ ಮೂಡಿದೆ. ಇಂದು ಅವರು ಸುರಕ್ಷಿತ ಲೈಂಗಿಕ ಕ್ರಿಯೆ ಅನುಸರಿಸುತ್ತಿರುವುದರಿಂದ ಎಚ್ಐವಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.ಐಸಿಟಿಸಿ ಸಮಾಲೋಚಕಿ ಕಲ್ಪನಾ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಎಚ್ಐವಿ ಸೋಂಕಿನ ನಿಯಂತ್ರಣ ಕ್ರಮಗಳು ಹಾಗೂ ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ,ಎನ್.ಜಿ.ಓ. ವರ್ಕರ್ಸ್, ತಾಳಿಕೋಟಿ ಎಸ್‌ವಿಎಮ್ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ವಿದ್ಯಾರ್ಥಿಗಳ ಜಾಗೃತಿ ಜಾಥಾ: ವೇದಿಕೆ ಕಾರ್ಯಕ್ರಮ ಮುನ್ನ ಎಸ್.ವಿ.ಎಂ. ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶ್ವ ಏಡ್ಸ್ ದಿನದ ಕುರಿತು ಜಾಥಾದ ಮೂಲಕ ಸಾರ್ವಜನಿಕರಲ್ಲಿ ಜನಜಾಗೃತಿಯನ್ನು ಮೂಡಿಸಲಾಯಿತು.

