ಸಿಂಧನೂರು, ಜುಲೈ 11: ಸಿಂಧನೂರು ತಾಲೂಕಿನ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಜನಸಂಖ್ಯೆ ನಿಯಂತ್ರಣ, ಕುಟುಂಬ ಕಲ್ಯಾಣ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಈ ಸಂದರ್ಭದಲ್ಲಿ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಲಾಜರ್ ಸಿರಿಲ್ ಅವರು ಮಾತನಾಡಿ, ವಿಶ್ವ ಜನಸಂಖ್ಯಾ ದಿನದ ಮಹತ್ವವನ್ನು ವಿವರಿಸಿದರು.ಅವರು ಮಾತನಾಡುತ್ತಾ, “ವಿಶ್ವ ಜನಸಂಖ್ಯಾ ದಿನವನ್ನು ಪ್ರತಿವರ್ಷ ಜುಲೈ 11ರಂದು ಆಚರಿಸುವ ಉದ್ದೇಶ ಜನಸಂಖ್ಯೆಯ ಏರಿಕೆಯಿಂದ ಉಂಟಾಗುವ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯ ಸಂಬಂಧಿತ ಸವಾಲುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಾಗಿದೆ.ಜನಸಂಖ್ಯೆ ಹೆಚ್ಚಳವು ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ, ಕುಡಿಯುವ ನೀರು, ವಸತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.ಆದ್ದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯುತ ನಾಗರಿಕರಾಗಿ ಕುಟುಂಬ ಕಲ್ಯಾಣ ಹಾಗೂ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಹೊಂದಿರಬೇಕು” ಎಂದು ಹೇಳಿದರು.ಮುಂದುವರಿದು, “ಆರೋಗ್ಯವಂತ ಕುಟುಂಬವೇ ಆರೋಗ್ಯವಂತ ಸಮಾಜದ ಅಡಿಪಾಯ. ಕುಟುಂಬ ಯೋಜನೆ, ತಾಯಿ ಮತ್ತು ಶಿಶು ಆರೋಗ್ಯ, ಮಹಿಳಾ ಶಿಕ್ಷಣ, ಪೌಷ್ಟಿಕ ಆಹಾರ, ಲಿಂಗ ಸಮಾನತೆ ಹಾಗೂ ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.ವಿಶೇಷವಾಗಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಹಾಗೂ ಫಾರ್ಮಸಿ ವಿದ್ಯಾರ್ಥಿಗಳು ಸಮಾಜದಲ್ಲಿ ಆರೋಗ್ಯ ಶಿಕ್ಷಣ ನೀಡುವ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯಕರ ಜೀವನಶೈಲಿ, ಕುಟುಂಬ ಕಲ್ಯಾಣ ಮತ್ತು ಜನಸಂಖ್ಯೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು” ಎಂದು ಕರೆ ನೀಡಿದರು.ಅಲ್ಲದೆ, “ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಾದರೆ ಆರೋಗ್ಯವಂತ, ಶಿಕ್ಷಣವಂತ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣ ಅಗತ್ಯವಾಗಿದೆ. ಯುವಜನರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಜನಸಂಖ್ಯೆ ನಿಯಂತ್ರಣ, ಆರೋಗ್ಯಕರ ಕುಟುಂಬ, ಮಹಿಳಾ ಸಬಲೀಕರಣ ಹಾಗೂ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಸದಾ ಶ್ರಮಿಸುವ ಸಂಕಲ್ಪ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಕೆ ಹಾಗೂ ಖ್ಯಾತ ದಂತ ತಜ್ಞರಾದ ಡಾ. ಸುಮಾ, ಆಸಿಫ್ ಉಪನ್ಯಾಸಕರಾದ ರಾಜೇಶ್, ಅಶು ಪಾಷಾ, ಸಂತೋಷಿ, ಸುಧಾ, ವೀರೇಶ್, ಶೋಭಾ, ಚೈತ್ರ, ದಿಲೀಪ್, ಹರ್ಷಿತಾ, ಸಾಗರ್, ಸನಾ ಹಾಗೂ ಸುರೇಶ್ ಯಾದವ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ಡಿ ಫಾರ್ಮಸಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *