ನನ್ನ ಮಗ MNC ಕಂಪನಿಯಲ್ಲಿ ಕೆಲಸ ಮಾಡುತ್ತಾನೆ, ಸಾಫ್ಟ್ವೇರ್ ಎಂಜಿನಿಯರು ಅಂತ ಹೆಮ್ಮೆಯಿಂದ ಹೇಳುತ್ತಿದ್ದರು ಪಾಲಕರು. ಕಂಪ್ಯೂಟರ್ ಮುಂದೆ ಕೂತು ಏನು ಮಾಡುತ್ತಾನೆ ಅನ್ನೋ ವಿಷಯ ಗೊತ್ತಿಲ್ಲದೆ ಇದ್ರು, ಎನೋ ಹೆಮ್ಮೆ. ಈಗ ಆ ಕೆಲಸಕ್ಕೆ ಅವರೇ ಟ್ರೈನ್ ಮಾಡಿರುವ AI ಅವರ ಕೆಲಸಕ್ಕೆ ಕುತ್ತು ತಂದಿದೆ ಎಂದರೆ ಅವರಿಗೆ ಸೋಜಿಗ.
ಈ ಭಯ ಬರಿ ಸಾಫ್ಟ್ವೇರಿಗಷ್ಟೇ ಸೀಮಿತವಾಗಿಲ್ಲ. ಪ್ಲಂಬರ್ ಮತ್ತೆ ಎಲೆಕ್ಟ್ರಿಷಿಯನ್ ಬಿಟ್ಟರೆ ಎಲ್ಲಾ ವರ್ಗದ ಕೆಲಸ AI ಮಾಡಬಲ್ಲದು. ವಿಷಯ ಹೀಗಿರುವಾಗ ಮಷೀನ್ ಗಳು ಹೇಗೆ ಇಷ್ಟೆಲ್ಲ ಕಲಿಯುತ್ತವೆ ಅನ್ನೋ ಜಿಜ್ಞಾಸೆ ಮೂಡುವುದು ಸಹಜ.
ಕಳೆದ ಎರಡು ಮೂರು ದಶಕಗಳಿಂದ ಡಿಜಿಟೈಜೇಶನ್, ಅಂದರೆ ಕಾಗದದಲ್ಲಿದ್ದ ಡೇಟಾ ಕಂಪ್ಯೂಟರ್ ಅಲ್ಲಿ ಕಾಪಿಡುವದು, ನಿರಂತರವಾಗಿ ಮಾಡಲಾಯಿತು. ಪೇಪರ್ ಉಪಯೋಗ ಕಡಿಮೆ ಮಾಡಿ ಕಂಪ್ಯೂಟರ್ ಬಳಸಿ ಅನ್ನುವವರು ನಿತ್ಯವೂ ಉಂಡಮೇಲೆ ಮತ್ತು ತೊಳೆದ ಮೇಲೆ ವರೆಸುತ್ತಿರುವುದು ಮಾತ್ರ ಅದೇ ಪೇಪರ್ ಇಂದ.
ಈಗಿನ ಕಾಲದಲ್ಲಿ ಸ್ಮಾರ್ಟ್ ಅಂಬೋ ಏನೇನು ನಾವು ಬಳಸುತ್ತೇವೆಯೋ ಎಲ್ಲವೂ ನಮ್ಮ ಆಗು ಹೋಗುಗಳನ್ನ ನಿರಂತರವಾಗಿ ದಾಖಲಿಸುತ್ತವೆ. ಕಳೆದ ವಾರ ಎಲ್ಲೆಲ್ಲಿ ನೀವು ಹೋಗಿದ್ದೀರಿ ಅನ್ನೋದು ತಿಳಿಯಬೇಕೇ? ಗೂಗಲ್ ಪ್ರತಿಯೊಂದು ಜಾಗದ ವಿಷಯ ಹೇಳಿಬಿಡುತ್ತದೆ.
UPI ಎಂಬ ಪದ ಈಗ ಸರ್ವೇ ಸಾಮಾನ್ಯ, ಹೂ ಮಾರೋ ಹುಡುಗಿಯಿಂದ ಹಿಡಿದು ಐಷಾರಾಮಿ ಹೋಟೆಲ್ ವರೆಗೂ ಎಲ್ಲ ಕಡೆ ದುಡ್ಡು ಕೊಡಲು ಇದೇ ಈಗ ಮಾಧ್ಯಮ. ಇದರಿಂದ ಜನರು ಈಗೀಗ ಕಿಸೆಯಲ್ಲಿ ಪರ್ಸ್ ಇಡೋದು ಕಡಿಮೆಯಾಗಿದೆ. ಫೋನ್ ಪೇ ಅಂತ ಅಪ್ಲಿಕೇಶನ್ಗಳು ತಾವಾಗಿ ಏನೂ ಮಾಡೋದು ಬೇಕಿಲ್ಲ ಈ ಸೇವೆ ಕೊಡೋದಕ್ಕೆ ಅವು ಬ್ಯಾಂಕ್ ಗಳು ಕೊಡೊ ಸೇವೆಗೆ ಒಂದು ಸೇತುವೆ ಥರ ಕೆಲಸ ಮಾಡುತ್ತವೆ.
ಇನ್ಸ್ಟಾಗ್ರಾಮ್, ಫೇಸ್ಬುಕ್, ಯೂಟ್ಯೂಬ್ ಇತ್ಯಾದಿ ಇತ್ಯಾದಿ ಸೇವೆಗಳು ಉಚಿತ ಎಂದು ಅನಿಸಿದರೂ, ಅವು ನಮ್ಮ ಬಗ್ಗೆ ಎಲ್ಲಾ ವಿಷಯ ಸಂಗ್ರಹಣೆ ಮಾಡಿ ಅದನ್ನು ಸೇವೆ ಕೊಡೊ ಕಂಪನಿಗಳಿಗೆ ಮಾರಾಟ ಮಾಡುತ್ತವೆ.
ಇದು ಹತ್ತಾರು ವರ್ಷಗಳಿಂದ ಸತತವಾಗಿ ನಡೆಯುತ್ತಾ ಬಂದಿದೆ. ನಮ್ಮ ಡೇಟಾ ನಮಗೆ ಸೇವೆ ಕೊಡಲು ಅಂದರೆ ಸೇವೆಗಳನ್ನು ನಮಗೆ ಮಾರಾಟ ಮಾಡಲು ಉಪಯೋಗವಾಗುತ್ತದೆ. ಈ ಡೇಟಾ ಅನ್ನು ವಿಶ್ಲೇಷಿಸುವುದು ಕಾಲಾಂತರದಲ್ಲಿ ಒಂದು ಹೊಸ ಸೇವೆಗೆ ಮೂಲವಾಯಿತು. ಅದೇ AI, ಇದರ ಮೂಲ ಮಷೀನ್ ಲರ್ನಿಂಗ್. ಇದರಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಗಳು ಅಪಾರ. ಡೇಟಾ ಇಂದ ನಮ್ಮನ್ನು ಅರ್ಥಮಾಡಿಕೊಳ್ಳಲು ಈಗ ಬಹಳ ಸುಲಭ. UPI ನಮ್ಮ ಆರ್ಥಿಕ ಸ್ಥಿತಿ ತಿಳಿಸಿದರೆ, ಯೂಟ್ಯೂಬ್ ಅಂಥ ಸೇವೆಗಳು ನಮ್ಮ ರಾಜಕೀಯ ನಿಲುವು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಳೆದ ಐವತ್ತು ವರ್ಷದಿಂದ ಮಾಡುತ್ತಿರುವ ಕಂಪ್ಯೂಟರ್ ಪ್ರೋಗ್ರಾಂ ಗಳಿಂದ ಪ್ರೋಗ್ರಾಮ್ಮಿಂಗ್ ಕಲಿತರೆ, ನಮ್ಮ ಆನ್ಲೈನ್ ಬದುಕಿನಿಂದ ನಮ್ಮ ಬಗ್ಗೆ ಕಲಿಯುತ್ತವೆ. ಎಲ್ಲಿ ತಿನ್ನುತ್ತೇವೆ, ಏನು ನೋಡುತ್ತೇವೆ, ಎಲ್ಲಿ ಸಮಯ ಕಳೆಯುತ್ತೇವೆ, ಕೆಲಸದ ಜಾಗ ಯಾವುದು, ಮನೆ ಎಲ್ಲಿದೆ, ಕರೆಂಟ್ ಬಿಲ್ ಎಷ್ಟು, ನೀರಿನ ಬಿಲ್ ಎಷ್ಟು, ಪಾರ್ಲರ್ ಖರ್ಚು ಇತ್ಯಾದಿ ತಿಳಿದುಕೊಂಡರೆ ಈ ಕ್ಷಣದಲ್ಲಿ ನಮಗೆ ಏನು ಬೇಕಾಗಬಹುದು ಅಂತ ನಮ್ಮವರಿಗಿಂತ ಈ ಮಷೀನ್ ಗಳಿಗೆ ಹೆಚ್ಚು ಗೊತ್ತು. ಅಮೆಜಾನ್ ಅಂಥ ಅಪ್ಲಿಕೇಶನ್ಗಳು ಮತ್ತೆ ಸ್ಮಾರ್ಟ್ ಸ್ಪೀಕರ್ ಹಾಗೂ ಸ್ಮಾರ್ಟ್ ಟಿವಿ ಗಳು ನಮ್ಮ ಸಂವಾದಗಳನ್ನು ಆಲಿಸುತ್ತವೆ ಅಂದರೆ ನೀವು ಸೋಜಿಗಪಡಬೇಕಾಗಿಲ್ಲ.
ಇದೆಲ್ಲ ನಮ್ಮನ್ನ ಎಲ್ಲಿಗೆ ಕರೆದುಕೊಂಡು ಹೋಗುತ್ತದೋ! ಅದು ಸಮಯವೇ ಹೇಳುವದು. ಈ ಹಿಂದೆ ಸಂಸಾರ ಸಾಕಾದವರು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುತ್ತಿದ್ದರು, ಈಗ ಅಷ್ಟೆಲ್ಲ ಬೇಕಾಗಿಲ್ಲ ಸ್ಮಾರ್ಟ್ ಅನ್ನೋ ಎಲ್ಲ ವಸ್ತುಗಳ ಬಳಕೆ ಬಿಟ್ಟರೆ ಅದೇ ನಿರ್ವಾಣ.

