ಸಿರವಾರ -: ‘ಗ್ರಾಮೀಣ ಮಕ್ಕಳು ತಂತ್ರಜ್ಞಾನದಲ್ಲಿ ಹಿಂದೆ ಬೀಳಬಾರದು. ಕಂಪ್ಯೂಟ‌ರ್ ಶಿಕ್ಷಣದಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಭವಿಷ್ಯ ಉಜ್ವಲವಾಗಲಿ ಎಂಬುದೇ ನಮ್ಮ ಉದ್ದೇಶ’ ಎಂದು ಭರವಸೆಯ ಬೆಳಕು ಟ್ರಸ್ಟ್‌ ಅಧ್ಯಕ್ಷ ಸುನಿಲ್ ಗೌಡ ಹೇಳಿದರು.

ತಾಲ್ಲೂಕಿನ ಕುರುಕುಂದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಟುನರ್‌ ಇಂಟರ್‌ನ್ಯಾಷನಲ್ ಕಂಪನಿ ಸಹಯೋಗದಲ್ಲಿ ಟ್ರಸ್ಟ್‌ ವತಿಯಿಂದ 10 ಕಂಪ್ಯೂಟರ್‌ಗಳನ್ನು ಬುಧವಾರ ಉಚಿತವಾಗಿ ವಿತರಿಸಿ ಮಾತನಾಡಿದರು.

‘ನಗರದ ಮಕ್ಕಳಿಗೆ ಸಿಗುವ ಸೌಲಭ್ಯ ಹಳ್ಳಿ ಮಕ್ಕಳಿಗೂ ಸಿಗಬೇಕು. ಡಿಜಿಟಲ್ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೂ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗಬೇಕು. ಇದಕ್ಕಾಗಿ ನಮ್ಮ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತದೆ’ ಎಂದರು.

ಮುಖ್ಯಶಿಕ್ಷಕ ನಾಗಲಿಂಗಪ್ಪ ಮಾತನಾಡಿ, ‘ಗ್ರಾಮೀಣ ಮಕ್ಕಳ ವೈಜ್ಞಾನಿಕ ಬೆಳವಣಿಗೆಗೆ ಈ ಕೊಡುಗೆ ಸಹಾಯಕ. ಟ್ರಸ್ಟ್ ಹಾಗೂ ಕಂಪನಿಗೆ ಧನ್ಯವಾದಗಳು’ ಎಂದರು.

ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರಪ್ಪ ಗೌಡ ಮಾಲಿಪಾಟೀಲ, ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶರಣಬಸವ, ಪ್ರಾಚಾರ್ಯ ಮಲ್ಲಪ್ಪ, ಶಿಕ್ಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *