ತಾಳಿಕೋಟಿ: ಈ ಬಾರಿ ಮುಂಗಾರು ಮಳೆ ಇಲ್ಲಿಯವರೆಗೆ ಸರಿಯಾಗಿ ಬಾರದೆ ರೈತರು ತೀವ್ರ ಸಂಕಷ್ಟದಲ್ಲಿದ್ದು ಬರಗಾಲದ ವಾತಾವರಣ ನಿರ್ಮಾಣ ಆಗುತ್ತಿರುವ ಹಿನ್ನೆಲೆಯಲ್ಲಿ ತಾಳಿಕೋಟಿ ಪಟ್ಟಣದ ಮುಸ್ಲಿಂ ಸಮಾಜದ ಬಾಂಧವರು ಶುಕ್ರವಾರ ಪಟ್ಟಣದ ಅಂಜುಮನ್ ಪ್ರೌಢಶಾಲೆಯ ಹತ್ತಿರ ಇರುವ ಬಾಪುಗೌಡ ಸಂಗನಗೌಡ ಪಾಟೀಲ ಅವರ ಹೊಲದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನೂರಾರು ಮುಸ್ಲೀಮ ಬಾಂಧವರು ಶುಕ್ರವಾರದ ಸಾಮೂಹಿಕ ನಮಾಜ್ ನಿರ್ವಹಿಸಿದ ನಂತರ ಸ್ಥಳೀಯ ಸಾತೋ ಶಹೀದ ಜಾಮೀಯಾ ಮಸೀದಿಯಿಂದ ಅಂಜುಮನ್ ಶಾಲೆಯ ಮೈದಾನದವರೆಗೆ ಪಾದಯಾತ್ರೆ ಮೂಲಕ ತೆರಳಿ ನಂತರ ಈ ವಿಶೇಷ ಪ್ರಾರ್ಥನೆಯನ್ನು ಮೌಲಾನಾ ಮೊಹಮ್ಮದ್ ಅಜರುದ್ದೀನ ಖಾಸಮಿ ಅವರ ನೇತೃತ್ವದಲ್ಲಿ ನಿರ್ವಹಿಸಿದರು. ನಂತರ ದೇವನಲ್ಲಿ ಸಮೃದ್ಧ ಮಳೆ ಸುರಿಸುವಂತೆ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರಾದ ಸೈಯದ್ ಶಕೀಲ ಅಹ್ಮದ್ ಖಾಜಿ ಅವರು ಮಾತನಾಡಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನಮ್ಮ ರೈತರನ್ನು ಒಳಗೊಂಡು ಎಲ್ಲರೂ ತೊಂದರೆಯಲ್ಲಿದ್ದಾರೆ ಇಂಥ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಸೃಷ್ಟಿಕರ್ತನ ಮೊರೆ ಹೋಗಿ ಅವನಲ್ಲಿ ಮಳೆಗಾಗಿ ಪ್ರಾರ್ಥಿಸಬೇಕಾಗಿದೆ. ಪ್ರವಾದಿ ಮಹಮ್ಮದರು ಮಳೆ ಬಾರದೆ ಇದ್ದಾಗ ತಮ್ಮ ಅನುಯಾಯಿಗಳಿಗೆ ಈ ರೀತಿಯ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲು ಸೂಚಿಸಿದ್ದಾರೆ ಆದ್ದರಿಂದ ಇವತ್ತು ನಾವೆಲ್ಲರೂ ಇಲ್ಲಿ ಸೇರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದೇವೆ ಆ ಅಲ್ಲಾಹನು ಆದಷ್ಟು ಬೇಗ ಸಮೃದ್ಧಿದಾಯಕ ಮಳೆ ಸುರಿಸಲೆಂದು ನಮ್ಮ ಪ್ರಾರ್ಥನೆ ಯಾಗಿದೆ ಎಂದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಆಲಾ ಮಸೀದಿ ಅಧ್ಯಕ್ಷ ಅಲ್ಲಾಭಕ್ಷ ನಮಾಜಕಟ್ಟಿ, ಇದಗಾ ಕಮೀಟಿ ಉಪಾಧ್ಯಕ್ಷ ಅಬ್ದುಲ್ ರಜಾಕ ಮನಗೂಳಿ, ಖಜಾಂಚಿ ರೋಷನ್ ಡೋಣಿ, ಜಮಾತ್ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹೀದ ಸಮಾಜಕಟ್ಟಿ, ಜಮಾತೆ ಅಹಲೆ ಹದೀಸ್ ಅಧ್ಯಕ್ಷ ಅಬ್ದುಲ್ ರಜಾಕ ನಾಲತವಾಡ, ಜಾಮಿಯಾ ಮಸೀದಿ ಅಧ್ಯಕ್ಷ ಖಾಜಾಹುಸೇನ ಸಗರ, ಈದ್ಗಾ ಕಮಿಟಿ ಅಧ್ಯಕ್ಷ ಮಾಸೂಮಸಾಬಸಾಬ
ಕೆಂಭಾವಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಭಾವಿ, ನಿರ್ದೇಶಕ ಇಬ್ರಾಹಿಂ ಮನ್ಸೂರ, ಮೊಹಮ್ಮದ್ ಶಫೀಕ ಇನಾಮದಾರ, ಸಮಾಜದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಗಣ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಯುವಕರು ಉಪಸ್ಥಿತರಿದ್ದರು.


