ಸಿಂಧನೂರು ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಸರ್ಕಾರದ ಯೋಜನೆಯಾದ ಅನಿಮಲ್ ಬರ್ತ್ ಕಂಟ್ರೋಲ್ ನ್ನು ಜಾರಿಗೆ ತರಲು ಲಸಿಕೆ ಅಭಿಯಾನ ಹಾಗೂ ವಿವಿಧ ವಾರ್ಡ್ ಗಳಲ್ಲಿ ಕಸದ ಸಮರ್ಪಕ ವಿಲೇವಾರಿ ಕುರಿತು ಸಾರ್ವಜನಿಕ ಜಾಗೃತಿಯನ್ನು ಕೈಗೊಳ್ಳಬೇಕು ಎಂದು ಶ್ರೀ ಷಾ ಮಕಂದರ್ ಜನಪರ ಸೇವಾ ಸಮಿತಿಯ ಅಧ್ಯಕ್ಷರಾದ ಉಷ್ಮಾನ್ ಪಾಷಾ ನಗರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ವಾಹನ ಸವಾರರು, ಶಾಲೆಯ ಮಕ್ಕಳು, ಮಹಿಳೆಯರು, ತಿರುಗಾಡುತ್ತಿದ್ದು, ಗುಂಪಾಗಿ ಬರುವ ನಾಯಿಗಳ ಹಿಂಡು ಕಂಡು ಭಯಗೊಂಡಿದ್ದಾರೆ.
ಕೆಲವೊಮ್ಮೆ ವಾಹನಗಳನ್ನು ಬೆನ್ನಟ್ಟುತ್ತಿವೆಂದು ವಾಹನ ಸವಾರರು ದೂರಿದ್ದಾರೆ. ಸರ್ಕಾರದ ಸೂಚನೆಯಂತೆ ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅನಿಮಲ್ ಬರ್ತ್ ಕಂಟ್ರೋಲ್ ಕಾರ್ಯಕ್ರಮ ಎಲ್ಲಿ ಕೂಡ ಕಂಡು ಬಂದಿಲ್ಲ. ಕಾರಣ ಈ ಯೋಜನೆಯ ಅಡಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ಮೂಲಕ ಸಂತಾನೋತ್ಪತ್ತಿ ನಿಯಂತ್ರಿಸುವುದು ಹಾಗೂ ರೇಬಿಸ್ ಲಸಿಕೆಯನ್ನು ನೀಡುವುದು ಅನಿವಾರ್ಯ,
ಅನೇಕ ವಾರ್ಡ್ ಗಳಲ್ಲಿ ಹೆಣ್ಣು ನಾಯಿಗಳು ಮರಿಗಳಿಗೆ ಜನ್ಮ ನೀಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ನಾಯಿಗಳ ಸಂಖ್ಯೆ ನಿಯಂತ್ರಣ ತಪ್ಪುತ್ತಿದೆ. ರಾತ್ರಿ ವೇಳೆ ಜೋರಾಗಿ ಕಿರುಚುವುದು, ವಾಹನ ಸವಾರರ ಬೆನ್ನಟ್ಟುವುದು, ಹೆಚ್ಚಾಗಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರು ರಸ್ತೆಯಲ್ಲಿ ಸಂಚರಿಸಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಪಟ್ಟಣದಲ್ಲಿ ಕಸದ ಸಮರ್ಪಕ ವಿಲೇವಾರಿ ಆಗದಿರುವುದು ಬೀದಿ ನಾಯಿಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹೊಟೇಲ್ ಹಾಗೂ ಮಾರುಕಟ್ಟೆ ಪ್ರದೇಶಗಳ ಬಳಿ ಘನ ತ್ಯಾಜ್ಯ ಬೀಳುವುದರಿಂದ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುತ್ತಿವೆ. ಕಾರಣ ಆದಷ್ಟು ಬೇಗ ಅನಿಮಲ್ ಬರ್ತ್ ಕಂಟ್ರೋಲ್ ಕಾರ್ಯಕ್ರಮವನ್ನು ನಗರದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.

