ರಾಯಚೂರು,ಜು,06: ಮನುಷ್ಯರಿಗೆ ಬರುವ ಖಾಯಿಲೆಗಳು ಯಾರಿಗಾದರೂ ಬರಬಹುದು, ಇಂತವರಿಗೆ ಅಂತಾ ಬರುವುದಿಲ್ಲ, ಅದರಲ್ಲೂ ಜೀವಕ್ಕೆ ಮಾರಕವಾಗುವ ಕಾನ್ಸ್‌ರ್‌ನಂತ ರೋಗಗಳನ್ನು ಎಲ್ಲರೂ ಸೇರಿ ತಡೆಗಟ್ಟಬೇಕಿದ್ದು, ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ಬರದಂತೆ ತಡೆಯಲು ಸರಕಾರವು ಉಚಿತವಾಗಿ ಹಾಕುತ್ತಿರುವ ಹೆಚ್‌ಪಿವಿ ಲಸಿಕೆಯನ್ನು ತಪ್ಪದೆ 14 ವರ್ಷದ ಹೆಣ್ಣು ಮಕ್ಕಳಿಗೆ ಹಾಕಿಸಲು ಡಾ ಶ್ವೇತಾಂಬರಿ ಮನವಿ ಮಾಡಿದರು.ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಾರ್ಗದರ್ಶನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಜಹೀರಾಬಾದ್ ಸಂಯೋಗದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಹೆಚ್‌ಪಿವಿ ಲಸಿಕೆ ಹಾಕಿದ ನಂತರ ಮಾತನಾಡುತ್ತಾ, ವಿಶೇಷವಾಗಿ ತಂದೆ-ತಾಯಿ ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ಈ ಲಸಿಕೆ ಅತ್ಯಂತ ಉಪಯುಕ್ತವಾಗಿದ್ದು ತಪ್ಪದೆ ಹಾಕಿಸಲು ಕೋರಿದರು.ಗರ್ಭಕಂಠದ ಕ್ಯಾನ್ಸರ್ ಉಂಟಾಗುವ ಕಾರಣಗಳು: ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಹೂಮನ್ ಪ್ಯಾಪಿಲೋಮ ವೈರಸ್ (ಹೆಚ್.ಪಿ.ವಿ) ಸೋಂಕು ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆಗಳಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ. ಈ ಹಿನ್ನಲೆಯಲ್ಲಿ ಮಾರಕವಾಗುವುದನ್ನು ತಡೆಯಲು ಹೆಚ್.ಪಿ.ವಿ ಲಸಿಕೆಯು ಸೂಕ್ತವಾಗಿದೆ. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಮಾತನಾಡಿ, ಕೆಲವು ವ್ಯಕ್ತಿಗಳು ಅದರಲ್ಲೂ ಯಾವುದೇ ವೈದ್ಯ ಪದವಿ ಪಡೆಯದವರು ತಾವೇ ವೈದ್ಯರೆಂಬಂತೆ ಬಿಂಬಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ನೀಡುವುದನ್ನು ನಂಬದೆ ಹಾಗೂ ಅನಗತ್ಯ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ, ತಮ್ಮ ಮನೆಯ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಹೆಚ್.ಪಿ.ವಿ (ಹೂಮನ್ ಪ್ಯಾಪಿಲೋಮ ವೈರಸ್) ವಿರುದ್ಧದ ಲಸಿಕೆಯನ್ನು ತಪ್ಪದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹಾಕಿಸಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಶುಶ್ರೂಷಣಾಧಿಕಾರಿ ಸುವರ್ಣಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಮಲ್ಲೇಶ್ವರಿ, ಶಾರದಾ, ಶಶಿಕಲಾ, ಆರೋಗ್ಯ ನಿರೀಕ್ಷಾಣಾಧಿಕಾರಿ ಶೃತಿ ಸೇರಿದಂತೆ ಶಾಲಾ ವಿದ್ಯಾರ್ಥಿನಿಯರು, ಪಾಲಕರು ಉಪಸ್ಥಿತರಿದ್ದರು.ಆರ್‌ಕೆಎಸ್‌ಕೆ ಕೌನ್ಸಲರ್ ಗೌರಮ್ಮ, ಆಶಾ ಕಾರ್ಯಕರ್ತೆ ಸೇರಿದಂತೆ ತಾಯಂದಿರು ಸಾರ್ವಜನಿಕರು ಉಪಸ್ಥಿತರಿದ್ದರು.


