ಬೆಂಗಳೂರು, ಜು. 6: ರಾಜ್ಯದ ರೈತರಿಂದ ಸರ್ಕಾರದ ಖರೀದಿ ಕೇಂದ್ರಗಳ ಮೂಲಕ ಖರೀದಿಸಲಾದ ಮುಂಗಾರು ಹಾಗೂ ಹಿಂಗಾರು ಜೋಳದ ಖರೀದಿ ಹಣವನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ರೈತರು ಬೆಳೆದ ಜೋಳವನ್ನು ಸರ್ಕಾರ ಖರೀದಿಸಿ ಸುಮಾರು ನಾಲ್ಕು ತಿಂಗಳುಗಳು ಕಳೆದಿದ್ದರೂ, ಬಹುತೇಕ ರೈತರಿಗೆ ಇನ್ನೂ ಖರೀದಿ ಹಣ ಪಾವತಿಯಾಗಿಲ್ಲ. ಕೆಲವೇ ರೈತರಿಗೆ ಹಣ ಜಮೆಯಾಗಿದ್ದು, ಸುಮಾರು 75 ಶೇಕಡಾ ರೈತರು ತಮ್ಮ ಬಾಕಿ ಹಣಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರೈತರು ಸಾಲ ಮಾಡಿ, ಅಪಾರ ಶ್ರಮವಹಿಸಿ ಬೆಳೆದ ಜೋಳವನ್ನು ಜನವರಿ ತಿಂಗಳಲ್ಲಿ ಖರೀದಿ ಕೇಂದ್ರಗಳಿಗೆ ಒಪ್ಪಿಸಿದ್ದರೂ, ಹಣ ಸಕಾಲಕ್ಕೆ ದೊರೆಯದ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್ ಹಾಗೂ ಖಾಸಗಿ ಸಾಲಗಳ ಮೇಲಿನ ಬಡ್ಡಿಯ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಅಪಾರ ನಷ್ಟ ಅನುಭವಿಸಿದ್ದು, ಈ ವರ್ಷವೂ ಮಳೆಯ ಕೊರತೆಯಿಂದ ಮುಂಗಾರು ಬೆಳೆ ಹಾನಿಗೊಳಗಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರವೇ ಖರೀದಿಸಿದ ಬೆಳೆಯ ಹಣವನ್ನು ವಿಳಂಬವಾಗಿ ಪಾವತಿಸುವುದು ರೈತರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ, ರಾಜ್ಯದ ಎಲ್ಲಾ ರೈತರಿಗೆ ಬಾಕಿ ಇರುವ ಮುಂಗಾರು ಹಾಗೂ ಹಿಂಗಾರು ಜೋಳದ ಖರೀದಿ ಹಣವನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಹಣ ಪಾವತಿಸುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಲಾಗಿದೆ.

