ಮಾನ್ವಿ -: ಪಟ್ಟಣದ ದೇವಣ್ಣ ತೋಟ ಏರಿಯಾದಲ್ಲಿ ರಾತ್ರಿ ವೇಳೆ ಮನೆ ಮುಂದಿನ ಗಂಧದ ಮರವನ್ನು ಕಳ್ಳರು ಕತ್ತರಿಸಿ ಕದ್ದೊಯ್ದ ಘಟನೆ ರವಿವಾರ ಬೆಳಗಿನ ಜಾವದಲ್ಲಿ ನಡೆದಿದೆ.

ಪಟ್ಟಣದ ದೇವಣ್ಣ ತೋಟದ ಕಾಲೋನಿಯಲ್ಲಿರುವ ನಿವೃತ್ತ ಶಿಕ್ಷಕ ಅಜ್ಜನಗೌಡ ಇವರ ಮನೆಯ ಆವರಣದಲ್ಲಿ ಬೆಳೆದು ನಿಂತಿದ್ದ ಅಂದಾಜು 15 ವರ್ಷಗಳ ಗಂಧದ ಮರದ ಮೇಲೆ ಕಣ್ಣು ಹಾಕಿದ ಕಳ್ಳರು ಶಿಕ್ಷಕ ಅಜ್ಜನಗೌಡ ಅವರು ಮನೆಯಲ್ಲಿ ಇಲ್ಲದನ್ನು ಗಮನಿಸಿ ರಾತ್ರಿ ಮನೆಯ ಕಂಪೌಂಡ್ ಹಾರಿ ಅಜ್ಜನಗೌಡ ಅವರ ಮಗ ಮಲಗಿದ್ದ ಕೋಣೆಯ ಹೊರಗಡೆ ಚಿಲಕ ಹಾಕಿ ಶಬ್ದ ರಹಿತ ಯಂತ್ರದಿಂದ ಬೆಲೆ ಬಾಳುವ ಗಂಧದ ಮರವನ್ನು ಕತ್ತರಿಸಿ ಪರಾರಿಯಾಗಿದ್ದಾರೆ.

ರವಿವಾರ ಬೆಳಿಗ್ಗೆ ಎದ್ದು ಕದ ತೆರೆಯಲು ಹೋದ ಮಗ ಹೊರಗಡೆಯಿಂದ ಚಿಲಕ ಹಾಕಿರುವುದನ್ನು ಕಂಡು ಪಕ್ಕದ ಮನೆಯವರಿಗೆ ಫೋನ್ ಮಾಡಿ ಕದ ತೆರೆಸಿದಾಗ ಮನೆಯ ಆವರಣದಲ್ಲಿದ್ದ ಗಂಧದ ಮರವನ್ನು ಕಳ್ಳರು ಕತ್ತರಿಸಿ ಕೊಂಡೊಯ್ದಿರುವುದನ್ನು ಕಂಡು ಹೌಹಾರಿದ್ದಾರೆ.

ನಂತರ ಪೋಲಿಸರಿಗೆ ಮಾಹಿತಿ ನೀಡಿದ ಅಜ್ಜನಗೌಡ ಅವರ ಪುತ್ರ ಪೊಲೀಸರ ಸಲಹೆ ಮೇರೆಗೆ ಅರಣ್ಯಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ದೂರು ಪಡೆದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜರು ಮಾಡಿದ್ದಾರೆ. ನಾಳೆ ಈ ಕುರಿತು ಪ್ರಕರಣ ದಾಖಲು ಮಾಡಿ ತನಿಖೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ಪುರುಷೋತ್ತಮ ತಿಳಿಸಿದ್ದಾರೆ.

Leave a Reply

Your email address will not be published. Required fields are marked *