ರಾಯಚೂರು, ಜೂನ್ 16: ರೈತರಿಗೆ ಗುಣಮಟ್ಟದ ಬೀಜ-ರಸಗೊಬ್ಬರಗಳ ಸಮರ್ಪಕ ಪೂರೈಕೆ, ಮುಂಗಾರು ಜೋಳದ ಬಾಕಿ ಹಣ ಬಿಡುಗಡೆ, ನಿವೇಶನ ರಹಿತ ಬಡ ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ಮನೆ ನಿವೇಶನ ವಿತರಣೆ ಸೇರಿದಂತೆ ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಜಿಲ್ಲಾಧಿಕಾರಿ ನಿವಾಸದ ಬಳಿಯಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ರೈತರು, ಮಹಿಳಾ ರೈತರು ಹಾಗೂ ಸಂಘದ ಕಾರ್ಯಕರ್ತರು ಭಾಗವಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಟಿಪ್ಪು ಸುಲ್ತಾನ್ ಗಾರ್ಡನ್‌ವರೆಗೆ ತೆರಳಿದರು. ಪ್ರತಿಭಟನಾಕಾರರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘದ ಮುಖಂಡರು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳು ಲಭ್ಯವಾಗುತ್ತಿಲ್ಲ. ಕೆಲವು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ರೈತರಿಗೆ ಎಂಆರ್‌ಪಿ ದರದಲ್ಲೇ ಬೀಜ ಮತ್ತು ರಸಗೊಬ್ಬರಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ಎಂಎಸ್‌ಪಿ ದರದಲ್ಲಿ ಖರೀದಿಸಿರುವ ಮುಂಗಾರು ಜೋಳದ ಬಾಕಿ ಹಣವನ್ನು ರೈತರ ಖಾತೆಗೆ ತಕ್ಷಣ ಜಮಾ ಮಾಡಬೇಕು. ಜೆಸ್ಕಾಂ ಮೂಲಕವೇ ವಿದ್ಯುತ್ ವಿತರಣೆಯನ್ನು ಮುಂದುವರಿಸಬೇಕು ಹಾಗೂ ವಿದ್ಯುತ್ ಖಾಸಗೀಕರಣದ ಯಾವುದೇ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ದೇವದುರ್ಗ, ಸಿಂಧನೂರು, ಮಸ್ಕಿ ಹಾಗೂ ಲಿಂಗಸೂಗೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ನಿವೇಶನ ರಹಿತ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು. ಆಶ್ರಯ ಯೋಜನೆಯಡಿ ಮನೆ ಹಾಗೂ ನಿವೇಶನ ಮಂಜೂರು ಮಾಡುವುದರ ಜೊತೆಗೆ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕಾರ್ಮಿಕರಿಗೆ ದೂರದ ಪ್ರದೇಶಗಳಲ್ಲಿ ಕೆಲಸ ನೀಡುವುದನ್ನು ನಿಲ್ಲಿಸಿ ಪೂರ್ಣ ಪ್ರಮಾಣದ ಕೂಲಿ ಪಾವತಿಸಬೇಕು. ಬಿಸಿಲಿನ ತಾಪದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಬಸವಂತ್ರಾಯಗೌಡ ಹಾಗೂ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ವಹಿಸಿದ್ದರು. ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ, ಚಂದ್ರಪ್ಪ ಹೊಸ್ಕೇರಾ, ಕರಿಯಪ್ಪ ಅಚ್ಚೊಳಿ, ಡಿ. ವೀರನಗೌಡ ಮಾನ್ವಿ, ಕೆ.ಜಿ. ವೀರೇಶ, ಶರಣಬಸವ, ಎಚ್. ಪದ್ಮ, ಶಕುಂತಲಾ ದೇಸಾಯಿ, ಮೌನೇಶ ಜಾಲಹಳ್ಳಿ, ಶಬ್ಬೀರ್ ಜಾಲಹಳ್ಳಿ, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ, ನಿಂಗಪ್ಪ ವಿರಾಪೂರ, ವಿರುಪಾಕ್ಷಪ್ಪಗೌಡ ಕಲ್ಲೂರು, ಹನುಮಂತ ಮಂಡಲಗುಡ್ಡ, ರಾಮನಗೌಡ ಗಣೇಕಲ್, ದುರುಗಪ್ಪ ಮಸ್ಕಿ, ಪೆಂಚಲಯ್ಯ ಹಟ್ಟಿ, ಹನುಮಂತ ಬಲದಂಡೆ ಮಸ್ಕಿ, ಮಾಹಾಂತೇಶ ಹಟ್ಟಿ, ಆಂಜಿನೈಯ್ಯ ನಾಗಲಾಪೂರ, ಸಂತೋಷ ತ್ಯಾಪ್ಲಿ, ಬಾಷಾ, ರಂಗನಾಥ ಬುಂಕಲದೊಡ್ಡಿ ಸೇರಿದಂತೆ ನೂರಾರು ರೈತರು ಹಾಗೂ ಮಹಿಳಾ ರೈತರು ಭಾಗವಹಿಸಿದ್ದರು.

