ಮಸ್ಕಿ : ಪಟ್ಟಣದಿಂದ ದಿನಾಲೂ ಲಿಂಗಸುಗೂರು,ಸಿಂಧನೂರು ಪಟ್ಟಣದ ವಿವಿಧ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ನೂರಾರು ವಿದ್ಯಾರ್ಥಿಗಳು ಪ್ರತಿದಿನ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ.
ಈ ಕುರಿತು ಪ್ರತಿಭಟನಾ ಸ್ವರೂಪದಲ್ಲಿ ಆಕ್ರೋಶ ಹೊರಹಾಕಿರುವ ವಿದ್ಯಾರ್ಥಿಗಳು, “ನಾವು ನಿಯಮಿತವಾಗಿ ಹಣ ನೀಡಿ ಬಸ್ ಪಾಸ್ ಪಡೆದಿದ್ದರೂ ನಮಗೆ ಸರಿಯಾದ ಸೇವೆ ಸಿಗುತ್ತಿಲ್ಲ. ಸಾರಿಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣವೇ ಕಾಲೇಜು ಸಮಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಮಸ್ಕಿ-ಲಿಂಗಸುಗೂರು ಮಾರ್ಗದಲ್ಲಿ ತಕ್ಷಣವೇ ಪ್ರತ್ಯೇಕ “ವಿದ್ಯಾರ್ಥಿ ವಿಶೇಷ ಬಸ್” ವ್ಯವಸ್ಥೆಯನ್ನು ಆರಂಭಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಗಮನಹರಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ.

