ರಾಯಚೂರು ಜೂನ್ 11 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಬುಧವಾರ ಬೆಳಿಗ್ಗೆ ಜಿಲ್ಲೆಯ ಸಿಂಧನೂರು ನಗರದ ವಿವಿಧ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮೊದಲು ಸಿಂಧನೂರಿನ ನಗರಸಭೆಗೆ ಆಗಮಿಸಿ, ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ನಗರಸಭೆಯ ವ್ಯಾಪ್ತಿಯಲ್ಲಿ ಸರಿಯಾಗಿ ಕಾಲಕಾಲಕ್ಕೆ ತೆರಿಗೆ ಸಂಗ್ರಹಿಸಬೇಕು. ನಗರದ ಜನರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದೆ. ಆದ್ದರಿಂದ ಕುಡಿಯುವ ನೀರನ್ನು ಆಗಾಗ ಪರೀಕ್ಷೆ ಮಾಡಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಗಮನ ಹರಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆವಹಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತಾಗಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸಿಂಧನೂರು ನಗರದ ವಿವಿಧ ರಸಗೊಬ್ಬರ ಹಾಗೂ ಕೀಟ ನಾಶಕ ಅಂಗಡಿಗಳಿಗೆ ಭೇಟಿ ನೀಡಿ, ದಾಸ್ತಾನು ಪುಸಕ್ತ, ರಶೀದಿ ಪುಸ್ತಕಗಳನ್ನು ಪರಿಶೀಲಿಸಿದರು. ಅಲ್ಲದೇ ಗ್ರಾಹಕರಿಗೆ ಯಾವ ದರದಲ್ಲಿ ಇವುಗಳನ್ನು ಮಾರಾಟ ಮಡಲಾಗುತ್ತಿದೆ. ದರ ಪಟ್ಟಿಯನ್ನು ಹಾಕಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದರು. ರೈತರಿಗೆ ಅನುಕೂಲವಾಗುಂತೆ ರಸ ಗೊಬ್ಬರ ದಾಸ್ತಾನು ಮಾಡಬೇಕೆಂದು ಅಂಗಡಿಯ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನಂತರ ಬಸ್ ನಿಲ್ದಾಣದ ಹತ್ತಿರವಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸುವ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿದೆ. ಕಡಿಮೆ ವೆಚ್ಚದ ಆಹಾರಗಳನ್ನು ಪೂರೈಕೆ ಮಾಡುವ ಜೊತೆಗೆ ಕ್ಯಾಟೀನ್‌ನಲ್ಲಿ ಸ್ವಚ್ಛತೆ ಮತ್ತು ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ನಂತರ ಸಿಂಧನೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪೂವಿತಾ ಎಸ್. ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿದರು.
ಸಿಬ್ಬಂದಿಯ ಹಾಜರಾತಿ ಪುಸ್ತಕ, ಕಚೇರಿ ಖರ್ಚು ವೆಚ್ಚದ ಕಡತಗಳನ್ನು ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಿರಬೇಕು ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ನಂತರ ವಾರ್ಡ್ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು.
ಔಷಧ ಉಗ್ರಾಣ ಪರಿಶೀಲಿಸಿ, ಔಷಧಗಳನ್ನು ರೋಗಿಗಳಿಗೆ ಸಮರ್ಪಕವಾಗಿ ವಿತರಣೆ ಮಾಡುವಂತೆ ಸೂಚಿಸಿದರು. ಯಾವುದೇ ಕಾರಣಕ್ಕೂ ಖಾಸಗಿ ಔಷಧ ಅಂಗಡಿಗಳಲ್ಲಿ ಖರೀದಿಸಲು ಚೀಟಿ ಬರೆದುಕೊಟ್ಟಿದ್ದು ಕಂಡು ಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ವೈದ್ಯರಿಗೆ ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಸ್ವಚ್ಛತೆಗೆ ಒತ್ತು ನೀಡಬೇಕು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸೌಜನ್ಯವಾಗಿ ವರ್ತಿಸಬೇಕು ಎಂದರು.
ನಂತರ ಸಿಂಧನೂರಿನ ತಹಶಿಲ್ದಾರ್ ಕಚೇರಿಗೆ ಭೇಟಿ ನೀಡಿ, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜನರಿಗೆ ಉತ್ತಮ ಆಡಳಿತ ನೀಡಬೇಕು. ಸಾರ್ವಜನಿಕರನ್ನು ವಿನಾ ಕಾರಣ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಹೇಳಿದ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತದ ಕಾರ್ಯಗಳ ಪ್ರಗತಿ ಪರಿಶೀಲಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಸಂಜೆ ತುರ್ವಿಹಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಲಿಂಗಸುಗೂರು ವಿಭಾಗದ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ಸಿಂಧನೂರು ಪೌರಾಯುಕ್ತ ಪಾಂಡುರಂಗ ಇಟಗಿ, ಸಿಪಿಐ ವೀರರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You missed

ಭಜನೆಗೆ ಸಕಾರಾತ್ಮಕ ಮನೋಭಾವ ವೃದ್ಧಿ : ವಾಗೀಶಾಚಾರ್ ಬಳ್ಳಾರಿ / ಕಂಪ್ಲಿ : ಅಧಿಕ ಮಾಸದಲ್ಲಿ ಭಗವಂತನ ಭಜನೆ ಮಾಡುವುದರಿಂದ ಸಕಾರಾತ್ಮಕ ಮನೋಭಾವನೆಯನ್ನು ವೃದ್ಧಿಗೊಳಿಸುತ್ತದೆ ಎಂದು ಗಂಗಾವತಿಯ ವಿಜಯಧ್ವಜ ವಿದ್ಯಾಪೀಠದ ಪ್ರಾಧ್ಯಾಪಕ ಪಂಡಿತ್ ವಾಗೀಶಾಚಾರ್ ಗೋರೆಬಾಳ ಹೇಳಿದರು. ಕಂಪ್ಲಿ-ಕೋಟೆಯ ಶ್ರೀಪಟ್ಟಾಭಿರಾಮಚಂದ್ರದೇವರ ದೇವಸ್ಥಾನದಲ್ಲಿ ಅಧಿಕ ಮಾಸದ ಮಂಗಳೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಭಜನಾ ಸಮಾರೋಪಕ್ಕೆ ಚಾಲನೆಯೊಂದಿಗೆ ಅಧಿಕ ಮಾಸ ಮಹಾತ್ಮೆ ಕುರಿತು ಉಪನ್ಯಾಸ ನೀಡಿ, ದಾನ ಧರ್ಮ ಪುಣ್ಯ ಪರೋಪಕಾರ್ಯಗಳನ್ನು ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. ಮನಸ್ಸನ್ನು ಭಗವಂತನದಲ್ಲಿ ಸ್ಥಿರವಾಗಿ ನಿಲ್ಲಿಸಲು ನಿತ್ಯ ಜಪ ತಪ, ಭಜನೆ, ಆರಾಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಕೋಟೆಯ ಶ್ರೀರಾಮ ಮಹಿಳಾ ಭಜನಾ ಮಂಡಳಿಯಿಂದ ಕಳೆದ 30ದಿನಗಳಿಂದ ಬ್ರಾಹ್ಮಣ ಸುವಾಸಿನಿಯರು ಹಮ್ಮಿಕೊಂಡಿದ್ದ ಭಜನೆಯನ್ನು ಮಂಗಳಗೊಳಿಸಲಾಯಿತು. ಈ ನಿಮಿತ್ತ ಶ್ರೀರಾಮದೇವರು, ಲಕ್ಷ್ಮಿ ನರಸಿಂಹ, ಪ್ರಾಣದೇವರು, ರುದ್ರದೇವರು, ರಾಯರ ಮೃತ್ತಿಕಾ ವೃಂದಾವನಗಳಿಗೆ ಸುಪ್ರಭಾತ, ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇವೆ ಸಲ್ಲಿಸಲಾಯಿತು. ಶ್ರೀರಾಮ ಮಹಿಳಾ ಭಜನಾ ಮಂಡಳಿಯ ಪ್ರಮುಖರಾದ ಸಾವಿತ್ರಿಬಾಯಿ ಜೋಷಿ, ರಮಾ ಪುರೋಹಿತ್, ವೇದಾ ಜೋಷಿ, ಚಂದ್ರಿಕಾ ಸಗರದ, ರಾಧಿಕ ಜೋಷಿ, ಜ್ಯೋತಿ ಗುಡಿ, ವಾಣಿ ಜೋಷಿ, ಲತಾ ರಾಮಾಯಣ, ರಚನಾ ಜೋಷಿ, ಸುಧಾ ವೈದ್ಯ, ಐಶ್ವರ್ಯ ಜೋಷಿ, ವರ್ಷಾವಿಕ್ರಮ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.