ಮಸ್ಕಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸ್ಥಳೀಯವಾಗಿ ‘ಅಭಿವೃದ್ಧಿಕಾರ’ ಎಂದೇ ಗುರುತಿಸಿಕೊಂಡಿರುವ ಆರ್.ಬಸನಗೌಡ ತುರವಿಹಾಳ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸ್ಕಿ ಕ್ಷೇತ್ರಕ್ಕೆ ಇದುವರೆಗೆ ಯಾವುದೇ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಅವಕಾಶ ನೀಡುವ ಸಂದರ್ಭ ಬಂದಿದ್ದು, ಪರಿಶಿಷ್ಟ ಪಂಗಡ ಸಮಾಜದ ಲೆಕ್ಕಾಚಾರದಲ್ಲಿ ಸಚಿವ ಸ್ಥಾನದ ಹಂಚಿಕೆಯಾಗುವುದಾದರೆ, ಪರಿಶಿಷ್ಟ ಪಂಗಡ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಸಂದರ್ಭದಲ್ಲಿ ಇವರ ಹೆಸರೇ ಮುಂಚೂಣಿಗೆ ಬಂದಿದ್ದು, ಆದ್ದರಿಂದ ಸಚಿವ ಸ್ಥಾನ ನೀಡಿದರೆ ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
ಆರ್.ಬಸನಗೌಡರು ಸತತ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ನಡೆದ ೧೭ ಕ್ಷೇತ್ರಗಳ ಉಪ ಚುನಾವಣೆಗಳ ಪೈಕಿ ಪ್ರಥಮ ಬಾರಿಗೆ ಕಾಂಗ್ರೆಸ್‌ನಿAದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದು, ನಂತರ ೨೦೨೩ರ ಚುನಾವಣೆಯಲ್ಲೂ ಮತ್ತೆ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಅತ್ಯುತ್ತಮ ಒಡನಾಟ ಹೊಂದಿದ್ದು, ಕ್ಷೇತ್ರದ ಹಾಗೂ ತಾಲೂಕಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ಅವರಿಗೆ ಈ ಬಾರಿಯ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ಶಾಸಕರಿಗೆ ಸಚಿವ ಸ್ಥಾನ ಸಿಕ್ಕರೆ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬುದು ಸ್ಥಳೀಯ ಕಾರ್ಯಕರ್ತರ ಮತ್ತು ಮುಖಂಡರ ಆಶಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾರಾಯಣಪ್ಪ ಕಾಸ್ಲಿ, ಮಲ್ಲಯ್ಯ ಮುರಾರಿ, ನಾಗಭೂಷಣ, ರವಿಕುಮಾರ ಮಡಿವಾಳ, ಯಮನೂರು ಬುದ್ದಿನ್ನಿ ಇದ್ದರು.

