ರಾಯಚೂರು : ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾ‌ರ್ ಅವರು ಸಿಎಂ ಸ್ಥಾನಕ್ಕೇರಲು ಸಜ್ಜಾಗಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಸಚಿವ ಸ್ಥಾನದ ಚರ್ಚೆ ಗರಿಗೆದರಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನವರೇ ಶಾಸಕರಿದ್ದು, ನಾಲ್ವರು ವಿಧಾನ ಪರಿಷತ್‌ ಸದಸ್ಯರಿದ್ದಾರೆ.

ಎನ್.ಎಸ್.ಬೋಸುರಾಜ್ : ಸಿದ್ದರಾಮಯ್ಯ ಸಂಪುಟದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಹಾಲಿ ಸಚಿವ ಎನ್.ಎಸ್.ಬೋಸರಾಜು ಅವರು ಡಿ.ಶಿವಕುಮಾ‌ರ್ ಸಂಪುಟದಲ್ಲಿಯೂ ಮುಂದುವರೆಯುವ ಆಸೆ ಇಟ್ಟುಕೊಂಡಿದ್ದು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮುಖ್ಯವಾಗಿ ಕಾಂಗ್ರೆಸನ ನಾಲ್ವರು ಶಾಸಕರೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇವರಲ್ಲಿ ಹಿರಿಯರಾದ ಐದು ಬಾರಿ ಶಾಸಕರಾದ ಸಿಂಧನೂರು ಕ್ಷೇತ್ರದ ಹಂಪನಗೌಡ ಬಾದರ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಿದರೆ ಹಿರಿತನದ ಆಧಾರದಲ್ಲಿ ಇವರಿಗೆ ಸ್ಥಾನ ನೀಡಬಹುದು ಎಂದು ಹೇಳಲಾಗುತ್ತಿದೆ.

ಹಂಪನಗೌಡ ಬಾದರ್ಲಿ ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಕೊನೆ ಕ್ಷಣದಲ್ಲಿ ಎಂಎಲ್‌ಸಿ ಎನ್‌.ಎಸ್‌.ಬೋಸರಾಜು ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಇವರಲ್ಲದೆ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರ ಪೈಕಿ ಎಲ್ಲರೂ ಒಂದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಹಂಪಯ್ಯ ನಾಯಕ : ಮಾನ್ವಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಹಂಪಯ್ಯ ನಾಯಕ ಅವರು ಕಾಂಗ್ರೆಸನಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಹಿರಿಯರಾದ ಇವರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಎಸ್ಟಿ ಕೋಟಾದಲ್ಲಿ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬಸನಗೌಡ ದದ್ದಲ್‌ : ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಸನಗೌಡ ದದ್ದಲ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವ ಎಸ್‌ಟಿ ಕೋಟಾದಡಿ ಸಚಿವ ಸ್ಥಾನ ನೀಡಬೇಕ ಪಟ್ಟು ಹಿಡಿದಿದ್ದಾರೆ. ಪ್ರಸ್ತುತ ಸಂಪುಟ ದರ್ಜೆಯ ವಾಲ್ಮೀಕಿ ಅಭಿವೃದ್ಧಿ ನಿಮಗದ ಅಧ್ಯಕ್ಷರೂ ಆಗಿರುವ ದದ್ದಲ್ ತೆರೆಮರೆಯಲ್ಲಿ ಸಚಿವ ಸ್ಥಾನದ ಕಸರತ್ತು ನಡೆಸುತ್ತಿದ್ದಾರೆ.

ಬಸನಗೌಡ ತುರ್ವಿಹಾಳ : ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರೂ ಆಗಿರುವ ಮಸ್ಕಿ ಕ್ಷೇತ್ರದ ಶಾಸಕ ಆರ್ ಬಸನಗೌಡ ತುರ್ವಿಹಾಳ ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಇವರು ಎಸ್ಟಿ ಕೋಟಾದಲ್ಲಿ ಸಚಿವ ಸ್ಥಾನ ನೀಡಿದರೆ ತಮಗೆ ಆದ್ಯತೆ ನೀಡಬೇಕು ಎಂದು ಹೈಕಮಾಂಡ್ಗೆ ಮನವಿ ಮಾಡಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಎ.ವಸಂತಕುಮಾರ : ವಿಧಾನ ಪರಿಷತ್‌ ಸದಸ್ಯರಾದ ಎ.ವಸಂತಕುಮಾರ ಅವರು ಪಕ್ಷಕ್ಕಾಗಿ ಅನೇಕ ವರ್ಷ ದುಡಿದಿದ್ದು, ತಮಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಎಸ್ಸಿ ಕೋಟಾದಡಿ ಸಚಿವ ಸ್ಥಾನ ಬೇಕು ಎಂದು ಪ್ರಯತ್ನ ನಡೆಸಿದ್ದಾರೆ. ಅದರೆ ಇದುವರೆಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಇವರು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಬಸನಗೌಡ ಬಾದರ್ಲಿ: ಏತನ್ಮಧ್ಯೆ ಸಿಂಧನೂರು ತಾಲೂಕಿನವರಾದ ಎಂಎಲ್ ಸಿ ಬಸನಗೌಡ ಬಾದರ್ಲಿ ಅವರು ಡಿ.ಕೆ ಶಿವಕುಮಾರ ಅವರ ಆಪ್ತರಾಗಿದ್ದು, ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ ಯುವ ಘಟಕದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿರುವ ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿ ಬಂಡಾಯ ಎದ್ದಿದ್ದರು. ಬಳಿಕ ಪಕ್ಷ ಅವರಿಗೆ ಚುನಾವಣೆ ಬಳಿಕ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಸಮಾಧಾನ ಪಡಿಸಿ ಎಂಎಲ್ಸಿ ಮಾಡಿದ್ದರು. ಹಾಲಿ ಶಾಸಕ ಹಾಗೂ ತಾತನವರಾದ ಹಂಪನಗೌಡ ಗೌಡ ಬಾದರ್ಲಿಗೆ ಸೆಡ್ಡು ಹೊಡೆದು ಸಚಿವ ಸ್ಥಾನ ಪಡೆದರೂ ಆಶ್ಚರ್ಯವಿಲ್ಲ.

ಪಕ್ಷದ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದು ಕಾದು ನೋಡಬೇಕಿದೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಕೇವಲ ಜಿಲ್ಲೆ ಮಾತ್ರವಲ್ಲ, ಜಾತಿ ಸಮೀಕರಣ, ವೈಯಕ್ತಿಕ ವರ್ಚಸ್ಸು ಕೆಲಸ ಮಾಡಲಿದ್ದು ಆದ್ದರಿಂದ ಸಚಿವಕಾಂಕ್ಷಿಗಳು ದಿಲ್ಲಿ ಹಾಗೂ ರಾಜ್ಯ ನಾಯಕರ ದುಂಬಾಲು ಬಿದ್ದಿದ್ದಾರೆ.

Leave a Reply

Your email address will not be published. Required fields are marked *