ರಾಯಚೂರು ಏಪ್ರಿಲ್ 17 (ಕರ್ನಾಟಕ ವಾರ್ತೆ): ರಾಯಚೂರಿನ ಜಿಲ್ಲಾಡಳಿತದಿಂದ ಏ.23ರಂದು ಅರ್ಥಪೂರ್ಣವಾಗಿ ಶ್ರೀ ಭಗೀರಥ ಜಯಂತಿಯನ್ನು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಚರಣೆ ಮಾಡಲಾಗುತ್ತಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇತ್ತೀಚೆಗೆ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಶ್ರೀ ಭಗೀರಥ ಮಹರ್ಷಿಗಳ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.
ಶ್ರೀ ಭಗೀರಥ ಜಯಂತಿಯನ್ನು ಏಪ್ರಿಲ್ 23ರ ಬೆಳಿಗ್ಗೆ 9ಗಂಟೆಗೆ ನಗರದ ಲಕ್ಷ್ಮಿ ವೆಂಕಟೇಶ ದೇವಸ್ಥಾನದಿಂದ ಮೆರವಣೆಗೆ ಹಮ್ಮಿಕೊಳ್ಳಲಾಗಿದೆ. ನಂತರ ಬೆಳಿಗ್ಗೆ 11ಗಂಟೆಗೆ ನಗರದ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಮುದಾಯದ ಮುಖಂಡರ ಸಲಹೆಯಂತೆ ದಿವ್ಯ ಸಾನಿಧ್ಯ ಹಾಗೂ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಲಾಗುವುದು ಎಂದರು.
ಜಯಂತಿ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಸಮುದಾಯದವರು ಸೇರಿ ಜಯಂತಿ ಆಚರಣೆ ಮಾಡಬೇಕು. ಜಯಂತಿ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದು ಆಗಿದೆ. ಮಹನೀಯರ ತತ್ವ ಆದರ್ಶಗಳನ್ನು ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಸರ್ಕಾರದ ಮಾರ್ಗಸೂಚಿಯನ್ವಯ ಜಯಂತಿ ಆಚರಣೆ ನಡೆಯಬೇಕು. ಶಿಷ್ಟಾಚಾರ ಅನುಸಾರ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸಬೇಕು. ಜಯಂತಿಗೆ ಆಗಮಿಸುವ ಜನತೆಗೆ ಕುಡಿಯುವ ನೀರು, ಉಪಹಾರ, ಆಸನದ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಯಂತಿಯನ್ನು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಚರಣೆ ಮಾಡುವಂತೆ ಆದೇಶ ಹೊರಡಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

