ರಾಯಚೂರು ಏಪ್ರಿಲ್ 14 (ಕರ್ನಾಟಕ ವಾರ್ತೆ): ಜಗತ್ತಿನ ಶ್ರೇಷ್ಠ ಜ್ಞಾನಿಯಾಗಿದ್ದ ಅಂಬೇಡ್ಕರ್ ಅವರು ತಮ್ಮ ಪ್ರತಿಭೆಯನ್ನು ಮನುಕುಲದ ಉದ್ಧಾರಕ್ಕಾಗಿ ಮುಡಿಪಾಗಿಟ್ಟರು. ಅವರ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕೆಂದು ರಾಯಚೂರು ನಗರದ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು.
ಏಪ್ರಿಲ್ 14ರ ಮಂಗಳವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಶಾಂತಿಯುತ, ಸಮೃದ್ಧಿಯಾಗಿ ಯಾವುದಾದರೂ ದೇಶ ಇದ್ದಾರೆ. ಅದು ಭಾರತ ದೇಶವಾಗಿದೆ. ಇದಕ್ಕೆ ಮೂಲಕಾರಣ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾರತ ಸಂವಿಧಾನವಾಗಿದೆ. ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಓದಬೇಕು. ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರೇರಣಿಯಾಗಬೇಕೆಂದರು.
ಪ್ರಭಾರಿ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ ಬಹಳ ದೊಡ್ಡದಾಗಿತ್ತು. ಸಂವಿಧಾನ, ಕಾನೂನು, ಆರ್ಥಿಕ ವಿಷಯಗಳಲ್ಲಿ ತಂಜ್ಞರಾಗಿ ಮಾತ್ರವಲ್ಲದೇ ಪ್ರಪಂಚದ ಎಲ್ಲಾ ವಿಷಯಗಳಲ್ಲಿ ಪರಿಣಿತರಾಗಿದ್ದರು. ಪ್ರತಿಯೊಬ್ಬರೂ ಅವರ ತೋರಿಸಿದ ಮಾರ್ಗದಲ್ಲಿ ನಡೆಯಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಕುವೆಂಪು ಕನ್ನಡ ಅಧ್ಯಯನ ಕುಪ್ಪಳ್ಳಿ ಮತ್ತು ಹಿರಿಯ ವಿದ್ವಾಂಸರಾದ ಡಾ.ಬಿ.ಎಂ.ಪುಟ್ಟಯ್ಯ ಅವರು ಮಾತನಾಡಿ, ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನು ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ ಎನ್ನದೇ, ರಾಜಕೀಯ, ಸಂಸದೀಯ, ಪ್ರಜಾಪ್ರಭುತ್ವದ ದೃಷ್ಟಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ ಎಂದು ಕರೆಯಬೇಕು. ಅಂಬೇಡ್ಕರ್ ಸಂಶೋಧನಾ ಕೇಂದ್ರಗಳು, ಅಧ್ಯಯನ ಕೇಂದ್ರಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಕೇಂದ್ರಗಳೆಂದು ಉಲ್ಲೇಖಿಸಬೇಕು. ಮತ್ತು ಎಲ್ಲಾ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಬೇಕೆಂದರು.
ಸಂವಿಧಾನದಲ್ಲಿ ಬಡವ-ಶ್ರೀಮಂತ ಎನ್ನದೆ ದೇಶದ ಪ್ರತಿ ವ್ಯಕ್ತಿಗೆ ಒಂದೇ ಮತದ ಹಕ್ಕು ನೀಡಲಾಗಿದೆ. ಲಿಂಗ, ಜಾತಿ, ಧರ್ಮ, ಬಾಷೆ ಆಧಾರಿತ ತಾರತಮ್ಯ ಮಾಡುವಂತಿಲ್ಲ. ಇದು ಪ್ರಜಾಪ್ರಭುತ್ವದ ವೈಶಿಷ್ಟ್ಯ. ತಂದೆ, ಪತ್ನಿ, ಕೊನೆಗೆ ಮಕ್ಕಳನ್ನು ಕಳೆದುಕೊಂಡರು ಅಂಬೇಡ್ಕರವರು ಈ ದೇಶದ ದೀನ ದಲಿತರ, ಬಡವರ, ಅಲ್ಪಸಂಖ್ಯಾತರ, ದಮನಿತರಿಗೆ ನ್ಯಾಯ ಕಲ್ಪಿಸಲು ಜೀವನ ಪರ್ಯಂತ ಹೋರಾಡಿದ ಮಹಾನ್ ಹೋರಾಟಗಾರ ಎಂದು ಬಣ್ಣಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ನೇಹ, ಸಂಗೀತಾ ಹಾಗೂ ಗೀತಾ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಅಂಗವಾಗಿ ವಿವಿಧ ಗಣ್ಯರಿಂದ ಸನ್ಮಾನಿಸಿ, ಗೌರವಿಸಲಾಯಿತು.
ವಿವಿಧ ಗಣ್ಯರಿಂದ ಛಾಯಾಚಿತ್ರ ವೀಕ್ಷಣೆ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಅಂಗವಾಗಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಧನೆ ಕುರಿತು ಅವರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಛಾಯಾಚಿತ್ರಗಳನ್ನು ಜಿಲ್ಲಾಧಿಕಾರಿಗಳು, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಗಣ್ಯರು, ಸಾರ್ವಜನಿಕರು ವೀಕ್ಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಬೀದರ್ ಬುದ್ಧ ವಿಹಾರನ ಬಂತೆಜಿ ಯಾಕತ್ನೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ್, ರಾಯಚೂರು ತಹಶಿಲ್ದಾರ್ ಸುರೇಶ್ ವರ್ಮ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರವೀಣ್ ಕುಮಾರ್, ಆದಿಜಾಂಭವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಸಭೆಯಲ್ಲಿ ಇದ್ದರು.

Leave a Reply

Your email address will not be published. Required fields are marked *