ಮಾನ್ವಿ : ಬೇಸಿಗೆ ಹಿನ್ನಲೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಕುಡಿಯುವ ನೀರಿನ ಜಲಸಂಗ್ರಹಕ್ಕೆ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ವಿಧಾನ ಪರಿಷತ್ತಿನ ಸಭಾ ನಾಯಕ ಎನ್.ಎಸ್. ಬೋಸರಾಜು ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಹಂಪಯ್ಯ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಲಸಂಗ್ರಹ ಗರದ ಪರಿಸ್ಥಿತಿ ಹಾಗೂ ನೀರಿನ ಮಟ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ನಗರ ನಿವಾಸಿಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆ ಆಗುವಂತೆ ಯೋಜಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಸಂಗ್ರಹವಾಗಿರುವ ನೀರು ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ಸೂಕ್ತ ನಿರ್ವಹಣೆ ಮಾಡಬೇಕು ಹಾಗೂ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ದೇವಮಾನೇ ಅವರು ವಿವರ ನೀಡುತ್ತಾ, ಪ್ರಸ್ತುತ ಜಲಸಂಗ್ರಹ ಗರದಲ್ಲಿ 6.2 ಮೀಟರ್ ಮಟ್ಟದ ನೀರು ಸಂಗ್ರಹವಾಗಿದ್ದು, ಸಂಪೂರ್ಣ ಭರ್ತಿಗೆ 9 ಮೀಟರ್ ಮಟ್ಟದವರೆಗೆ ನೀರು ಸಂಗ್ರಹಿಸಬೇಕಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಂಡು ನೀರಿನ ಸಂಗ್ರಹವನ್ನು ಹೆಚ್ಚಿಸುವಂತೆ ಸಚಿವರು ಸೂಚಿಸಿದರು.
ನಗರದಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರು ಸರಬರಾಜು ವ್ಯವಸ್ಥೆಯನ್ನು ಬಲಪಡಿಸುವುದು, ಪೈಪ್‌ಲೈನ್ ದುರಸ್ತಿ ಕಾರ್ಯಗಳನ್ನು ವೇಗಗೊಳಿಸುವುದು ಹಾಗೂ ಸೋರಿಕೆ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ಶಾಸಕ ಜಿ. ಹಂಪಯ್ಯ ನಾಯಕ್ ಮಾತನಾಡಿ, ಮಾನ್ವಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್ ಸಾಬ್, ಮಾಜಿ ನಗರಸಭಾ ಸದಸ್ಯ ರುದ್ರಪ್ಪ ಅಂಗಡಿ, ಸೈಯದ್ ಖಾಲಿದ್ ಖಾದ್ರಿ, ನರಸಪ್ಪ ರಬ್ಬಣಕಲ್, ಸತ್ತಾರ್ ಬಂಗ್ಲೆವಲೇ, ಕನಕಪ್ಪ ಯಾದವ್ ಸೇರಿದಂತೆ ಪುರಸಭೆಯ ಸಿಬ್ಬಂದಿ ವರ್ಗ, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


