ಕಾರಟಗಿ ಎ 13 : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ, ಕಾರಟಗಿ ಅಗ್ನಿಶಾಮಕ ಠಾಣೆಯ ವ್ಯಾಪ್ತಿಯಲ್ಲಿ ಏಪ್ರಿಲ್ 14 ರಿಂದ ಏಪ್ರಿಲ್ 20, 2026 ರವರೆಗೆ *”ಅಗ್ನಿಶಾಮಕ ಸೇವಾ ಸಪ್ತಾಹ”*ವನ್ನು ಹಮ್ಮಿಕೊಳ್ಳಲಾಗಿದೆ.
ಈ ವರ್ಷದ ಸಪ್ತಾಹವು “ಸುರಕ್ಷಿತ ಶಾಲೆ, ಸುರಕ್ಷಿತ ಆಸ್ಪತ್ರೆ ಮತ್ತು ಅಗ್ನಿ ಸುರಕ್ಷತೆಯ ಅರಿವುಳ್ಳ ಸಮಾಜ – ಅಗ್ನಿ ಮುನ್ನೆಚ್ಚರಿಕೆಗಾಗಿ ಒಂದಾಗಿ” (Safe School, Safe Hospital & Fire Safety Aware Society – Together for Fire Prevention) ಎಂಬ ಘೋಷವಾಕ್ಯದೊಂದಿಗೆ ನಡೆಯಲಿದೆ.
ಸಾರ್ವಜನಿಕ ಸ್ಥಳಗಳು, ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಬೆಂಕಿ ಅವಘಡಗಳನ್ನು ತಡೆಗಟ್ಟುವ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಬೇಸಿಗೆಯ ಕಾಲವಾಗಿರುವುದರಿಂದ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕರು ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಗ್ಯಾಸ್ ಸೋರಿಕೆ ಹಾಗೂ ಕಸಕ್ಕೆ ಬೆಂಕಿ ಹಾಕುವ ವಿಷಯದಲ್ಲಿ ಜಾಗರೂಕರಾಗಿರಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣವೇ ಠಾಣೆಯ ಕರೆ ಸಂಖ್ಯೆ 112/101 ಅಥವಾ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದು ಕೋರಲಾಗಿದೆ.
ಬೆಂಕಿ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರಿಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಕಾರಟಗಿ ಅಗ್ನಿಶಾಮಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Leave a Reply

Your email address will not be published. Required fields are marked *