ರಾಯಚೂರು ಏಪ್ರಿಲ್ 09 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಏಪ್ರಿಲ್ 20ರಂದು ಸಂಭ್ರಮದಿಂದ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಅವರು ತಿಳಿಸಿದರು.ಏಪ್ರಿಲ್ 09ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಬಸವಣ್ಣ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂದು ಬೆಳಿಗ್ಗೆ 9ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಬೆಳಿಗ್ಗೆ 11ಕ್ಕೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸರ್ಕಾರದ ಮಾರ್ಗಸೂಚಿಯನ್ವಯ ಜಯಂತಿ ಆಚರಣೆ ನಡೆಯಬೇಕು. ಶಿಷ್ಟಾಚಾರ ಅನುಸಾರ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸಬೇಕು. ಜಯಂತಿಗೆ ಆಗಮಿಸುವ ಜನತೆಗೆ ಕುಡಿಯುವ ನೀರು, ಉಪಹಾರ, ಆಸನದ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಯಂತಿಯನ್ನು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಚರಣೆ ಮಾಡುವಂತೆ ಆದೇಶ ಹೊರಡಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಅಪರ ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜದ ಮುಖಂಡರಾದ ಶಿವಾನಂದ ಚೌಕಿ, ಚಂದ್ರಶೇಖರ ಪಾಟೀಲ ಮಿರ್ಜಾಪುರ, ಪರಮೇಶ್ವರ ಸಾಲಿಮಠ, ನಾಗೇಶ್ವರಪ್ಪ, ಬಸವರಾಜ, ಚೆನ್ನಬಸವಣ್ಣ, ಜೆ.ಬಸವರಾಜ, ಆನಂದ ಪಾಟೀಲ, ಕಲ್ಲಯ್ಯ ಸ್ವಾಮಿ, ವೀರಪ್ಪಣ್ಣ ಗೌಡ ಬಂಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಭೆಯಲ್ಲಿ ಇದ್ದರು.

